ಗೋಣಿಕೊಪ್ಪಲುವಿನಲ್ಲಿ ಜು. 8 ಮತ್ತು 9 ರಂದು ಬಂದ್ : ಗ್ರಾ. ಪಂ. ಸಭೆಯಲ್ಲಿ ತೀರ್ಮಾನ

07/07/2020

ಮಡಿಕೇರಿ ಜು. 7 : ಕೊರೋನಾ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪದಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.8 ಮತ್ತು 9 ರಂದು ಬಂದ್ ಮಾಡಲು ಗ್ರಾ.ಪಂ ನಿರ್ಧರಿಸಿದೆ.
ಜನರ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಪಟ್ಟಣವನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಪಂಚಾಯಿತಿ ಕೋರಿದೆ. ಅಲ್ಲದೇ ಸಮಸ್ಯೆ ಬಗೆಹರಿಯುವವರೆಗೂ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ವ್ಯಾಪಾರ ವಹಿವಾಟು ನಡೆಸುವಂತೆ ಸಲಹೆ ನೀಡಿದೆ.
ಗ್ರಾ.ಪಂ ಪ್ರಭಾರ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಬಂದ್ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು ಮಾಹಿತಿ ನೀಡಿದರು.
ಈ ಸಂದರ್ಭ ಮುರುಗ, ಜೆ.ಕೆ.ಸೋಮಣ್ಣ, ರಾಮಕೃಷ್ಣ, ಮಂಜುಳ ಮತ್ತಿತರ ಸದಸ್ಯರು ಹಾಜರಿದ್ದರು. ವರದಿ : ಜಗದೀಶ್ ಜೋಡುಬೀಟಿ