ಪ್ರಕೃತಿ ಸೌಂದರ್ಯದಿಂದ ಕಂಗೋಳಿಸುತ್ತಿರುವ ಆಗುಂಬೆ

07/07/2020

ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಪಶ್ಚಿಮ ಘಟ್ಟದಲ್ಲಿರುವ ಈ ಊರು ಒಂದು ಪ್ರವಾಸಿ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದಲ್ಲಿ ಸೂರ್ಯಾಸ್ತದ ದೃಶ್ಯ, ವನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಆಕಾಶ ನಿರ್ಮಲವಾಗಿರುವುದರಿಂದ, ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ. ಆದರೆ ಮಳೆಯೇ ಮಲೆನಾಡಿನ ಜೀವಾಳ. ಮಳೆಗಾಲದಲ್ಲಿ ಕಾದಿದ್ದು, ಸೂರ್ಯಾಸ್ತವನ್ನು ಕಾಣುವುದೇ ಒಂದು ಸಡಗರದ ಸನ್ನಿವೇಶ.

ಇತಿಹಾಸ :

ಕಳೆದ ಶತಮಾನದ ಆರಂಭದಲ್ಲಿ ಇದು ಒಂದು ಪ್ರಮುಖ ಊರು ಆಗಿತ್ತು. ಇದು ಆಗಿನ ಮೈಸೂರು ರಾಜ್ಯಕ್ಕೆ ಸೇರಿತ್ತು, ಮತ್ತು ಬ್ರಿಟೀಷ್-ಮುಂಬಯಿ ಮತ್ತು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಮಂಗಳೂರು ನಡುವಿನ ಕೊಂಡಿಯಾಗಿತ್ತು. ಆಗಿನ ಕಾಲದಲ್ಲಿ ಮಂಗಳೂರಿನಿಂದ ಮುಂಬಯಿಗೆ ಹೋಗುವವರು ಆಗುಂಬೆ ಮಾರ್ಗವಾಗಿ ಹೋಗುತ್ತಿದ್ದರು. ಪ್ರಯಾಣಿಕರು ಎತ್ತಿನ ಗಾಡಿಗಳಲ್ಲಿ ಬಂದು ರಾತ್ರಿ ತಂಗಿ ಮುಂಬಯಿ ಅಥವಾ ಮಂಗಳೂರಿಗೆ ಪ್ರಯಾಣ ಮುಂದುವರಿಸುತ್ತಿದ್ದರು. ನಂತರ ಮೈಸೂರಿನ ದೀವಾನ್ ಪಿ.ಎನ್.ಕೃಷ್ಣಮೂರ್ತಿಯವರು ಒಂದು ದೊಡ್ಡ ಪ್ರಯಾಣಿಕರ ತಂಗುದಾಣವನ್ನು 1906ರಲ್ಲಿ ಕಟ್ಟಿಸಿದರು. ಪ್ರಯಾಣಿಕರಿಗೆ ಉಚಿತ ಊಟ ವಸತಿಗಳನ್ನು ಒದಗಿಸಿದರು. ಕಲ್ಲು ಗಾರೆಗಳಿಂದ ನಿರ್ಮಿಸಿದ ಈ ತಂಗುದಾಣ ಇಂದು ಚಾವಣಿಯನ್ನು ಕಳೆದುಕೊಂಡು ಶಿಥಿಲವಾಗಿ ನಿಂತಿದೆ. ನಂತರದ ದಿನಗಳಲ್ಲಿ ಕಲ್ಲಿದ್ದಲಿನಿಂದ ಓಡುವ 7 ಆಸನಗಳ ಮೋಟಾರು ವಾಹನಗಳು ಬಂದವು. ಜನರು ಆಗುಂಬೆಯಿಂದ ಈ ವಾಹನ ಬಳಸಿ ಹರಿಹರಕ್ಕೆ ಹೋಗಿ ನಂತರ ಅಲ್ಲಿಂದ ರೈಲಿನಲ್ಲಿ ಮುಂಬಯಿಗೆ ತೆರಳುತ್ತಿದ್ದರು. ನಂತರದ ದಿನಗಳಲ್ಲಿ 14 ತೀಕ್ಷ್ಣ ತಿರುವುಗಳನ್ನು ಹೊಂದಿದ ಘಾಟಿಯನ್ನು ನಿರ್ಮಿಸಲಾಯಿತು. ಆಗುಂಬೆ ಮತ್ತು ಸೋಮೇಶ್ವರದ ಮಧ್ಯೆ ಬಾಡಿಗೆ ಕಾರು (ಟಾಕ್ಸಿ) ಉದ್ಯಮ ಪ್ರಾರಂಭವಾಯಿತು. ರೈಲ್ವೇ ಹಳಿಗಳ ಕೆಳಗೆ ಬಳಸುವ ಮರದ ಬಾರಾಟಿಗೆಗಳು ಆಗುಂಬೆಯ ಕಾಡುಗಳಿಂದ ಹೋಗುತ್ತಿದ್ದವು. ಅದು ಒಂದು ಉದ್ಯಮವಾಗಿ ಬೆಳೆಯುತ್ತಿದ್ದಂತೆ ಕಣ್ಣು ಬಿಟ್ಟ ಸರ್ಕಾರ ಅದನ್ನು ಮಟ್ಟ ಹಾಕಿತು.ಮಿನಿ ಬಸ್ಸುಗಳನ್ನು ಪ್ರಾರಂಭಿಸಿದ ಮೇಲೆ ಟ್ಯಾಕ್ಸಿ ಉದ್ಯಮ ನೆಲ ಕಚ್ಚಿತು. ಆಗುಂಬೆಯ ಕಾಡುಗಳಲ್ಲಿ ಬೆತ್ತ ಹೇರಳವಾಗಿ ದೊರೆಯುತ್ತಿದ್ದರಿಂದ ಬೆತ್ತದ ಉದ್ಯಮಗಳು ಪ್ರಾರಂಭವಾದವು.