ಪಕ್ಷಕ್ಕೆ ಮುಜುಗರ ಉಂಟು ಮಾಡಿದರೆ ಶಿಸ್ತು ಕ್ರಮ : ಮಂಜುನಾಥ್ ಕುಮಾರ್ ಎಚ್ಚರಿಕೆ

07/07/2020

ಮಡಿಕೇರಿ ಜು.7 : ಇತ್ತೀಚೆಗೆ ಕೆಲವು ಕಾಂಗ್ರೆಸ್ಸಿಗರು ಪಕ್ಷದಲ್ಲಿದ್ದುಕೊಂಡೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಯಾರೂ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಬಾರದೆಂದು ಸೂಚನೆ ನೀಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಪಕ್ಷಕ್ಕೆ ಹೊಸ ಶಕ್ತಿ ಬಂದಿದ್ದು, ಕೊಡಗು ಜಿಲ್ಲೆಯಲ್ಲೂ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಪಕ್ಷ ಸಂಘಟನೆಯಲ್ಲಿ ಯಶಸ್ಸಿನ ದಿಕ್ಕಿನಲ್ಲಿ ಸಾಗುತ್ತಿರುವ ನಾಯಕರುಗಳ ಬಗ್ಗೆ ವಿನಾಕಾರಣ ಟೀಕೆ ಮಾಡುವುದನ್ನು ಜಿಲ್ಲಾ ಕಾಂಗ್ರೆಸ್ ಸಹಿಸುವುದಿಲ್ಲ. ಮಾತ್ರವಲ್ಲದೆ ಈ ಬಗ್ಗೆ ಕೆಪಿಸಿಸಿ ಕೂಡ ನಿಗಾ ವಹಿಸಿದ್ದು, ಸೂಕ್ತ ಕ್ರಮದ ಮುನ್ಸೂಚನೆ ನೀಡಿದೆ ಎಂದು ಹೇಳಿದ್ದಾರೆ.
ಪಕ್ಷದ ಏಳಿಗೆಗಾಗಿ ಶ್ರಮಿಸುವ ಮೂಲಕ ಸಂಘಟಿತ ನಾಯಕತ್ವಕ್ಕೆ ಒತ್ತು ನೀಡಿ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸುವ ಕಾರ್ಯ ಮಾಡುವಂತೆ ಕರೆ ನೀಡಿರುವ ಮಂಜುನಾಥ್ ಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರ ಸೂಚನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ತಿಳಿಸಿದ್ದಾರೆ. ಆಂತರಿಕ ವಿಚಾರಗಳನ್ನು ಬಹಿರಂಗಡಿಸಿ ಪಕ್ಷಕ್ಕೆ ಮತ್ತು ನಾಯಕತ್ವಕ್ಕೆ ಮುಜುಗರ ಉಂಟು ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.