ಕೊಡಗಿನಲ್ಲಿ ಉತ್ತಮ ಮಳೆ : ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ : ಮಡಿಕೇರಿ ಆಕಾಶವಾಣಿ ಬಳಿ ಬರೆ ಕುಸಿತ

07/07/2020

ಮಡಿಕೇರಿ ಜು.7 : ಕೊಡಗು ಜಿಲ್ಲೆಯ ವಿವಿಧೆಡೆ ಮೋಡ ಸಹಿತ ಮಂಜು ಮುಸುಕಿದ ವಾತಾವರಣದ ನಡುವೆ ಉತ್ತಮ ಮಳೆಯಾಗಿದೆ.
ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೇಶ ಮುಂಡನ ಸ್ಥಳ, ನಾಗನ ಕಟ್ಟೆಯ ಮೆಟ್ಟಿಲಿನವರೆಗೆ ನೀರು ಬಂದಿದ್ದು, ಜನರು ನದಿಗೆ ಇಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಬೆಳಗಿನಿಂದಲೇ ನಿರಂತರ ಮಳೆಯಾಗಿದೆ. ನಗರದ ಆಕಾಶವಾಣಿ ಕಚೇರಿಯ ಬಳಿ ಬರೆ ಕುಸಿತ ಉಂಟಾಗಿದೆÉ. ಕಳೆದ ವರ್ಷ ಸುರಿದ ಮಳೆಗೆ ಆಕಾಶವಾಣಿ ಟವರ್ ಪಕ್ಕದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾಗಿತ್ತು. ಆದರೆ ಬೇಸಿಗೆಯಲ್ಲಿ ತಡೆಗೋಡೆ ನಿರ್ಮಿಸದೆ ಇದೀಗ ಮಳೆ ಸುರಿಯುವ ಸಂದರ್ಭ ಕಾಮಗಾರಿ ಕೈಗೆತ್ತಿಕೊಂಡದ್ದೇ ಬರೆ ಕುಸಿಯಲು ಕಾರಣವಾಗಿದೆ.
ಕಾರ್ಮಿಕರು ತಡೆಗೋಡೆ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭ ಬರೆ ಕುಸಿದು ಬಿದ್ದಿದೆ. ಮಣ್ಣು ಬೀಳುವ ಸಂದರ್ಭ ಸ್ಥಳದಲ್ಲಿದ್ದ ಕಾರ್ಮಿಕರು ಓಡಿಹೋಗಿದ್ದು, ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ಬರೆ ಕುಸಿದ ಪ್ರದೇಶದ ಕೆಲವೇ ಅಡಿಗಳ ದೂರದಲ್ಲಿ ಆಕಾಶವಾಣಿಯ ಟವರ್ ಇದ್ದು, ಅಪಾಯದ ಮುನ್ಸೂಚನೆ ಕಂಡು ಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಂಜಿನ ನಗರಿ ಮಡಿಕೇರಿಯಲ್ಲಿ ಮೈಕೊರೆಯುವ ಚಳಿ ಇದೆ.