ಕಗ್ಗೋಡ್ಲು ಗ್ರಾಮದ ಗದ್ದೆಗಳಿಗೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು

07/07/2020

ಮಡಿಕೇರಿ ಜು.7 : ಜಿಲ್ಲೆಯ ಗ್ರಾಮಸ್ಥರನ್ನು ಕಾಡುತ್ತಿರುವ ಕಾಡಾನೆಗಳ ಹಿಂಡು ಇಂದು ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮಕ್ಕೆ ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದೆ. ಭತ್ತದ ನಾಟಿಯಾಗಿದ್ದ ಗದ್ದೆಯಲ್ಲಿ ಕಾಡಾನೆಗಳು ಓಡಾಡಿದ ಪರಿಣಾಮ ನಾಟಿ ಧ್ವಂಸವಾಗಿದೆ. ಒಂದು ಮರಿಯಾನೆ ಸಹಿತ ಒಟ್ಟು 5 ಕಾಡಾನೆಗಳ ಹಿಂಡು ಬೆಳ್ಳಂಬೆಳಗ್ಗೆ ಭತ್ತದ ಗದ್ದೆಗೆ ಲಗ್ಗೆಯಿಟ್ಟಿದ್ದು ಸಸಿ ಮಡಿ, ನಾಟಿ ಮಾಡಿದ್ದ ಭತ್ತದ ಪೈರನ್ನು ನಾಶ ಮಾಡಿದೆ. ಸಮೀಪದ ನೀರುಕೊಲ್ಲಿ ಕಡೆಯಿಂದ ಇಳಿದು ಬಂದಿರುವ ಕಾಡಾನೆಗಳು ಕಗ್ಗೋಡ್ಲು ಕಾಫಿ ತೋಟಗಳ ಮೂಲಕ ಹಾಕತ್ತೂರು ಕಡೆಗೆ ತೆರಳಿರುವುದಾಗಿ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.