ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ : ಸೋಮವಾರಪೇಟೆ ಕಾಂಗ್ರೆಸ್ ಅಸಮಾಧಾನ

07/07/2020

ಸೋಮವಾರಪೇಟೆ ಜು.7 : ಕರೊನ ಲಾಕ್‍ಡೌನ್‍ನಿಂದ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಈ ಸಂದರ್ಭದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಶೋಷಣೆಗೆ ಮುಂದಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಆರೋಪಿಸಿದರು. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಇಂಧನದ ಬೆಲೆ ಏರಿಕೆಯಾಗುತ್ತಿದ್ದು, ಕಡಿಮೆ ಮಾಡಲು ಸರಕಾರ ಮುಂದಾಗದಿದ್ದಲ್ಲಿ ಕೇಂದ್ರ ಸರಕಾರದ ವಿರುದ್ಧ ಜಿಲ್ಲೆಯಾದ್ಯಂತ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರಕಾರÀ ಆಡಳಿತ ನಡೆಸುತ್ತಿವೆ. ಆದರೂ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿದೆ. ಜಿಲ್ಲೆಯ ಶಾಸಕರುಗಳು ಬಡಜನರ ಪರವಾಗಿ ಕಾರ್ಯನಿರ್ವಹಿಸಬೇಕು. ಎಲ್ಲೆಡೆ ಸೀಲ್‍ಡೌನ್‍ನಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೀಲ್ ಡೌನ್ ಏರಿಯಾದಲ್ಲಿ ಕಿಟ್ ನೀಡಲು ಮುಂದಾಗಬೇಕು. ಸಂಸದರು ಕೊಡಗಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿಲ್ಲ. ಮುಂಜಾಗ್ರತಾ ಕ್ರಮಗಳ ಕೊರತೆಯಿಂದ ಕೋವಿಡ್ ಉಲ್ಬಣ ಆಗುತ್ತಿದೆ.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಪ್ರಯುಕ್ತ 16 ಬ್ಲಾಕ್‍ನ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಜ್ಞಾವಿಧಿ ಕಾರ್ಯಕ್ರಮ ಆಯೋಜನೆ ಮಾಡಿ ಯಶಸ್ವಿಯಾಗಿದೆ. ಜಿಲ್ಲಾ ಘಟಕದ ವೀಕ್ಷಕರಾದ ಮಂಜುಳಾ ಮತ್ತು ತಾಲ್ಲೂಕು ಘಟಕದ ವೀಕ್ಷಕರಾದ ಎಡ್ವಿನ್ ಸೇರಿದಂತೆ ಮುಂಚೂಣಿ ಘಟಕದ ಪದಾಧಿಕಾರಿಗಳು ಆಗಮಿಸಿ ಸಲಹೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಿಥುನ್ ಹಾನಗಲ್ಲು ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಹಾಗೂ ಸಂಸದರು ಇದ್ದರೂ, ಜನರ ಸಂಕಷ್ಟ ಪರಿಹರಿಸಲು ಮುಂದಾಗಿಲ್ಲ. ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿರುವುದರಿಂದ ವೈರಸ್ ಹರಡುತ್ತಿದೆ. ಜಿಲ್ಲೆಯ ಹೋಮ್ ಸ್ಟೇ ಹಾಗೂ ರೆಸಾರ್ಟ್‍ಗಳಲ್ಲಿ ಪ್ರವಾಸಿಗರು ಮೋಜು ಮಸ್ತಿಗೆ ಆಗಮಿಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಇನ್ನಷ್ಟು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಈಗ ಜಿಲ್ಲಾಧಿಕಾರಿಗಳು ಪ್ರವಾಸಿಗರ ನಿಯಂತ್ರಣಕ್ಕೆ ಮುಂದಾಗಿದ್ದು, ಒಂದು ತಿಂಗಳ ಮುಂಚೆಯೇ ರೆಸಾರ್ಟ್ ಬಂದ್ ಮಾಡಬೇಕಿತ್ತು. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಜನತೆಯೇ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಗಮನಹರಿಸಬೇಕು ಎಂದರು.
ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಎ. ಯಾಕೂಬ್, ಬಸವರಾಜು, ಮಂಜುನಾಥ್ ಉಪಸ್ಥಿತರಿದ್ದರು.