ತಂತ್ರಜ್ಞಾನ ಆಧರಿತ ಶಾಲಾ ಶಿಕ್ಷಣ

08/07/2020

ಬೆಂಗಳೂರು ಜು.8 : ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರಾಜ್ಯದಲ್ಲಿ ತಂತ್ರಜ್ಞಾನ ಆಧರಿತ ಶಾಲಾ ಶಿಕ್ಷಣ ಮುಂದುವರೆಸುವ ಸಂಬಂಧ ಪ್ರೊ. ಎಂ.ಕೆ. ಶ್ರೀಧರ್ ಅಧ್ಯಕ್ಷತೆಯ ತಜ್ಞರ ಸಮಿತಿ ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವರದಿ ಸ್ವೀಕರಿಸಿ ಸಕಾರಾತ್ಮಕ ಅಂಶಗಳನ್ನು ತಕ್ಷಣದಿಂದಲೇ ಜಾರಿಗೆ ತರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸುರೇಶ್ ಕುಮಾರ್, 3 ರಿಂದ 6 ವರ್ಷ ವಯೋಮಾನದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟ, ಕಥೆ, ಪ್ರಾಸ ಸೇರಿದ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ ಅಥವಾ ಮುದ್ರಿತ ಬೋಧನಾ ವಿಧಾನಗಳನ್ನು ವಾರಕ್ಕೆ ಮೂರು ದಿನ ಪ್ರತಿದಿನ ಒಂದು ಗಂಟೆ ಅವಧಿಯಂತೆ ಕಲಿಸಬಹುದು ಎಂದು ವರದಿ ಹೇಳಿದೆ.
ಅದೇ ರೀತಿ 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ಮಾತ್ರ ವಾರಕ್ಕೆ ಮೂರು ದಿನ ಪ್ರತಿದಿನ ಎರಡು ಅವಧಿಯ ಕಲಿಕೆಗೆ ಅವಕಾಶ ನೀಡಬಹುದು. 3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಆನ್ ಲೈನ್ ಬೋಧನೆ ಮಾಡಬಹುದೆಂದು ಸಮಿತಿ ಸಲಹೆ ಮಾಡಿದೆ.