ಸಿಬಿಎಸ್‍ಇ ಪಠ್ಯಕ್ರಮ ಶೇ. 30ರಷ್ಟು ಕಡಿತ

08/07/2020

ನವದೆಹಲಿ ಜು.8 : ಕೊರೋನಾ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ನಿಗದಿಯಂತೆ ಶೈಕ್ಷಣಿಕ ವರ್ಷ ಆರಂಭವಾಗದೆ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿರುವ ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‍ಇ) 9 ರಿಂದ 12 ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಶೇ. 30ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ 9 ರಿಂದ 12ನೇ ತರಗತಿ ವರೆಗಿನ ಪಠ್ಯಕ್ರಮವನ್ನು ಶೇ. 30ರ ವರೆಗೆ ಕಡಿತಗೊಳಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರು ತಿಳಿಸಿದ್ದಾರೆ.
ದೇಶ ಮತ್ತು ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಕೊರೋನಾ ಅಸಾಮಾನ್ಯ ಪರಿಸ್ಥಿತಿಯನ್ನು ಗಮನಿಸಿ, ಸಿಬಿಎಸ್‍ಇಗೆ ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋರ್ಸ್ ಲೋಡ್ ಕಡಿಮೆ ಮಾಡುವಂತೆ ಸೂಚಿಸಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಈ ವರ್ಷ ಶಾಲೆಗಳು ನಿಗದಿಯಂತೆ ಆರಂಭಗೊಂಡಿಲ್ಲ. ಹೀಗಾಗಿ ಈ ಬಾರಿಯ ಪಠ್ಯಕ್ರಮದಲ್ಲಿ ಶೇ.30 ಕಡಿತಗೊಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ, ದೈಹಿಕ ಜ್ಞಾನಾರ್ಜನೆಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರವೇ ಇಟ್ಟು, ಶೈಕ್ಷಣಿಕ ವರ್ಷವನ್ನು ಮುಗಿಸಲು ಪಠ್ಯಕ್ರಮದಲ್ಲಿ ಕಡಿತಗೊಳಿಸಲಾಗಿದೆ ಎಂದು ಸಿಬಿಎಸ್ ಇ ಸ್ಪಷ್ಟಪಡಿಸಿದೆ.