ಕೇಂದ್ರ ತಂಡದಿಂದ ಕೊರೋನಾ ಅಧ್ಯಯನ

08/07/2020

ಬೆಂಗಳೂರು ಜು.8 : ರಾಜ್ಯದಲ್ಲಿ ಕೊರೋನಾ ಸೋಂಕು ಸ್ಥಿತಿಗತಿ, ಸರ್ಕಾರ ಕೈಗೊಂಡಿರುವ ನಿಯಂತ್ರಣ ಕ್ರಮಗಳ ಕುರಿತು ಕೇಂದ್ರ ಅಧ್ಯಯನ ತಂಡ ಎರಡು ದಿನಗಳ ಸಮಾಲೋಚನೆ, ಅಧ್ಯಯನ ಆರಂಭಿಸಿದೆ.
ಕೊರೋನಾ ಸೋಂಕು ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಕೇಂದ್ರ ತಂಡ ಮಹತ್ವದ ಚರ್ಚೆ ನಡೆಸಿತು.
ಕೇಂದ್ರದ ಇಎಂಆರ್ ನ ನಿರ್ದೇಶಕ ಪಿ.ರವೀದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಖ್ಯ ಕಾರ್ಯದರ್ಶಿ ಅರ್ತಿ ಅಹುಜಾ ನೇತೃತ್ವದ ತಂಡ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಿತು. ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡುವ ಅಗತ್ಯವಿದೆಯೇ? ಎನ್ನುವ ಕುರಿತಂತೆಯೂ ಪರಿಶೀಲನೆ ನಡೆಸಿದ್ದು, ರಾಜ್ಯಕ್ಕೆ ತಜ್ಞರು ನೀಡಿರುವ ಶಿಫಾರಸುಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿತು.
ಕೊರೋನಾ ನಿಯಂತ್ರಣ, ನಿರ್ವಹಣೆಗೆ ರಾಜ್ಯ ಕೈಗೊಂಡ ಕ್ರಮಗಳು, ಕೇಂದ್ರದ ಮಾರ್ಗಸೂಚಿಗಳ ಜಾರಿ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ, ಒಟ್ಟು ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿರುವ ಕುರಿತು ವಿವರ ಪಡೆದುಕೊಂಡಿದೆ.