ಪ್ರಾಕೃತಿಕ ವಿಕೋಪದ ಸ್ಥಳಗಳಿಗೆ ಎಸ್‍ಪಿ ಕ್ಷಮಾ ಮಿಶ್ರಾ ಭೇಟಿ : ಪರಿಶೀಲನೆ

08/07/2020

ಮಡಿಕೇರಿ ಜು. 8 : ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ, ಕೊಂಡಗೇರಿ ಕಾವೇರಿ ನದಿ ಗ್ರಾಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಭೂಕುಸಿತಕ್ಕೊಳಗಾದ ಮಡಿಕೇರಿ ತಾಲೋಕಿನ ಕಾಟಕೇರಿ, 2ನೇ ಮೊಣ್ಣಂಗೇರಿ ಮತ್ತು ಜೋಡುಪಾಲ ಗ್ರಾಮಗಳಿಗೆ ಹಾಗೂ ಕಳೆದ ಸಾಲಿನ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಜಲಾವೃತವಾದ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಕುಂಬಾರಗುಂಡಿ, ಬೆಟ್ಟದಕಾಡು ಗ್ರಾಮದ ಸ್ಥಳಗಳಿಗೆ ಇಂದು ಭೇಟಿ ನೀಡಿ
ಈ ಸಾಲಿನ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಮತ್ತೆ ಮಳೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದರು.
ಕಳೆದ ಸಾಲಿನಲ್ಲಿ ಸುರಿದ ಮಹಾಮಳೆಯಿಂದ ಕಾವೇರಿ ನದಿ ನೀರಿನ ಪ್ರವಾಹಕ್ಕೆ ಮನೆ ಆಸ್ತಿ, ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪರಿಹಾರ ಹಾಗೂ ಶಾಶ್ವತ ಸೂರು ಸಿಗದೆ ಕಂಗಾಲಾಗಿ ಇದೀಗ ಮತ್ತೆ ನದಿ ದಡದಲ್ಲೇ ಗುಡಿಸಲು ಕಟ್ಟಿ ವಾಸ ಮಾಡುತ್ತಿದ್ದಾರೆ. ಇದೀಗ ಮತ್ತೆ ಮಳೆ ಪ್ರಾರಂಭವಾಗಿ ನದಿ ನೀರಿನ ಮಟ್ಟವು ಏರಿಕೆಯಾಗುತ್ತಿದೆ. ಜಿಲ್ಲಾಡಳಿತ ಕಂದಾಯ ಇಲಾಖೆಯ ಮೂಲಕ ಸರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ಐ.ಪಿ.ಮೇದಪ್ಪ ಹಾಗೂ ಜಿಲ್ಲಾ ಪೊಲೀಸ್ ಘಟಕದ ವಿಪತ್ತು ನಿರ್ವಹಣಾ ತಂಡದ ನಾಯಕ ಆರ್.ಎಸ್.ಐ. ಭಾನುಪ್ರಕಾಶ್ ಮತ್ತು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಸಮನ್ವಯಾಧಿಕಾರಿ ಅನನ್ಯ ವಾಸುದೇವ್ ಇದ್ದರು.