ಕೊಡಗಿನಲ್ಲಿ ಉತ್ತಮ ಮಳೆ : ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

08/07/2020

ಮಡಿಕೇರಿ ಜು. 8 : ಕೊಡಗು ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಪರಿಣಾಮವಾಗಿ ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಗೆ ನೀರಿನ ಒಳ ಹರಿಯುವ ಪ್ರಮಾಣವೂ ಅಧಿಕಗೊಂಡಿರುವುದರಿಂದ ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗುವ ಲಕ್ಷಣ ಗೋಚರಿಸಿದೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಬುಧವಾರ ಬೆಳಗ್ಗಿನ ಅಂಕಿಅಂಶಗಳನ್ನು ಗಮನಿಸಿದಾಗ ಜಲಾಶಯಕ್ಕೆ 3968 ಕ್ಯುಸೆಕ್‍ನಷ್ಟು ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ 2847.3 ಅಡಿಗಳಿಗೆ ಏರಿಕೆಯಾಗಿದೆ.

ಜಲಾಶಯದ ಭದ್ರತೆಯ ದೃಷ್ಟಿಯಿಂದ ನೀರಿನ ಮಟ್ಟವನ್ನು 2857 ಅಡಿಗಳಿಗೆ ಸೀಮಿತಗೊಳಿಸಿ ಹೆಚ್ಚುವರಿ ನೀರನ್ನು ನದಿಗೆ ಹಾಗೂ ಅಗತ್ಯವಿದ್ದರೆ ನಾಲೆಗಳಿಗೆ ಹರಿಸಬೇಕಾಗುತ್ತದೆ. ಪ್ರಸಕ್ತ ಈ ಮಟ್ಟವನ್ನು ತಲುಪಲು ಕೇವಲ 10 ಅಡಿಗಳಷ್ಟೇ ಬಾಕಿ ಇದ್ದು, ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಮುಂದಿನ ಒಂದರಡು ದಿನಗಳಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.

ಕಳೆದ ಸಾಲಿನಲ್ಲಿ ಹಾರಂಗಿ ಜಲಾಶಯ ಆ.9 ರಂದು ಭರ್ತಿಯಾಗಿ ಅದೇ ದಿನ ನದಿಗೆ ನೀರನ್ನು ಹರಿಸಲಾಗಿತ್ತು. ಆದರೆ ಈ ಬಾರಿ ಜಲಾಶಯದಲ್ಲಿ ಕಳೆದ ಸಾಲಿನ ನೀರಿನ ಸಂಗ್ರಹವಿದ್ದುದರಿಂದ ಮತ್ತು ಪ್ರಸಕ್ತ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅತಿ ಶೀಘ್ರದಲ್ಲೇ ಜಲಾಶಯ ಭರ್ತಿಯಾಗಲಿದೆ ಎಂದು ಅಣೆಕಟ್ಟೆಯ ಇಂಜಿನಿಯರ್ ನಾಗರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ ಕೇವಲ 2812.30 ಅಡಿ ಹಾಗೂ ಒಳ ಹರಿವು 566 ಕ್ಯುಸೆಕ್‍ನಷ್ಟಿತ್ತು ಎಂದು ಅವರು ಹೇಳಿದ್ದಾರೆ.