ಪೊನ್ನಂಪೇಟೆಯಲ್ಲಿ ಆಶಾ ಕಾರ್ಯಕರ್ತರಿಗೆ ಸನ್ಮಾನ

July 8, 2020

ಮಡಿಕೇರಿ ಜು. 8 : ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಪೊನ್ನಂಪೇಟೆಯ ಎ.ಪಿ.ಸಿ.ಎಂ.ಎಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ ಮಾತನಾಡಿ, ಸಾಂಕ್ರಾಮಿಕ ರೋಗವಾಗಿ ಹರಡುತಿರುವ ಕೊರೋನಾವನ್ನು ಹತ್ತಿಕ್ಕುವಲ್ಲಿ ದುಡಿಯುತಿರುವ ಆಶಾ ಕಾರ್ಯಕರ್ತರ ಕೆಲಸವನ್ನು ಪ್ರಶಂಶಿಸಿದರು.
ನಂತರ ಕಾರ್ಯಕರ್ತೆಯರಾದ ಪ್ರಶಾಂತಿ, ಭವಾನಿ, ಮಲ್ಲಿಕಾ ಹಾಗೂ ಜೆನಿತ ಅವರನ್ನು ಶಾಲು ಹೊದಿಸಿ ಫಲ ತಂಬೂಲ ನೀಡಿ ಸನ್ಮಾನಿಸಿ ಸಂಸ್ಥೆಯ ವತಿಯಿಂದ ತಲಾ 3000 ರೂ. ಗಳ ಸಹಾಯಧನವನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪದಾರ್ಥಿ ಎಸ್. ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ. ಸೋಮಯ್ಯ, ಚೋಡುಮಾಡ ಶ್ಯಾಮ್ ಪೂಣಚ್ಚ, ಪುತ್ತಾಮನೆ ಜೀವನ್ ದೇವದಾಸ್, ಬಿಲ್ಲವರ ಎಸ್. ಚಂದ್ರಶೇಖರ್, ಬೊಟ್ಟಂಗಡ ದಶಮಿ ದೇಚಮ್ಮ, ಮಾಚಂಗಡ ನಿರನ್ ಮೊಣ್ಣಪ್ಪ, ಐಯ್ಣಂಡ ಬೋಪಣ್ಣ, ಅಪ್ಪಂಡೆರಂಡ ಶಾರದಾ, ಹೆಚ್. ಹೆಚ್. ತಮ್ಮಯ್ಯ, ಹೆಚ್. ಕೆ. ಡಿಕ್ಕಿ ಹಾಗೂ ಸಹಕಾರ ಇಲಾಖೆಯ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮೇಕೇರಿರ ಎಸ್. ಮೋಹನ್ ಹಾಜರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಕಳೇರ ಪೂನಂ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

error: Content is protected !!