ಯುಜಿಸಿಗೆ ವಿಶ್ವವಿದ್ಯಾನಿಲಯಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ದೇಶನ ನೀಡಿರುವುದು ಖಂಡನೀಯ

09/07/2020

ಮಡಿಕೇರಿ ಜು. 9 : ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮುದಾಯಿಕ ಹರಡುವಿಕೆಗೆ ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವಾಲಯ ಯುಜಿಸಿಗೆ ವಿಶ್ವವಿದ್ಯಾನಿಲಯಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ದೇಶನ ನೀಡಿರುವುದು ಖಂಡನೀಯ ಎಂದು ಎಐಡಿಎಸ್‍ಓ ಕೊಡಗು ಜಿಲ್ಲಾ ಸಂಚಾಲಕ ಸುಭಾಷ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿ ದಿನ ದೂಡುವಂತಾಗಿದೆ. ಆದರೆ ಗೃಹ ಸಚಿವಾಲಯ ಯುಜಿಸಿಗೆ ವಿಶ್ವವಿದ್ಯಾನಿಲಯಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ದೇಶನ ನೀಡಿದ್ದು, ಇದು ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಕರ, ಪೆÇೀಷಕರ, ಸಿಬ್ಬಂದಿಗಳ ಜೀವಕ್ಕೆ ಅಪಾಯವನ್ನು ಉಂಟುಮಾಡಲಿದೆ ಎಂದರು.
ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಿದ್ದರು. ಅಲ್ಲದೇ ಕೋವಿಡ್ ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬರುವವರೆಗೂ ಪರೀಕ್ಷೆ ನಡೆಸಬಾರದೆಂದು ಎಐಡಿಎಸ್‍ಓ ಮನವಿ ಸಲ್ಲಿಸಿತ್ತು. ಕೆಲವು ದಿನಗಳ ಹಿಂದೆ ಯುಜಿಸಿಯು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ತಮ್ಮ ಸುದ್ಧಿ ಬುಲೆಟಿನ್ ನಲ್ಲಿ ಹೇಳಿ ಕೊಂಡಿದೆ. ಅದರಂತೆ ಎಮ್‍ಹೆಚ್‍ಆರ್‍ಡಿ ಸಚಿವರು ಕೂಡ ಈ ಕುರಿತು ಸುತ್ತೋಲೆ ಹೊರಡಿಸುತ್ತೇವೆ ಎಂದು ಹೇಳಿದರು. ಆದರೆ ಈಗ ಪರೀಕ್ಷೆ ನಡೆಸುವ ದಿಢೀರ್ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ ಎಂದರು.
ಕೊರೋನಾ ವೈರಸ್‍ನಿಂದಾಗಿ ಬಹುಪಾಲು ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮವನ್ನು ಪೂರ್ಣಗೊಳಿಸಿಲ್ಲ. ಇಂಟರ್ನೆಟ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರದೆ ಏಕಪಕ್ಷೀಯವಾಗಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿರುವುದು ಖಂಡನೀಯ.
ಯುಜಿಸಿಯು ಈ ನಿರ್ದೇಶನಗಳನ್ನು ಹೊರಡಿಸುತ್ತಿದ್ದಂತೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದು, ಈ ಗಂಭೀರ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಾಳಜಿ ಮತ್ತು ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲು ಆದೇಶ ಹೊರಡಿಸಬೇಕೆಂದು ಸುಭಾಷ್ ಒತ್ತಾಯಿಸಿದರು.
ಕೋವಿಡ್ 19 ನಿಯಂತ್ರಣಕ್ಕೆ ಬರುವವರೆಗೂ ಪರೀಕ್ಷೆಗಳನ್ನು ನಡೆಸಬಾರದು, ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಸಮಸ್ಯೆಯನ್ನು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರವೇ ಅದನ್ನು ಪರಿಹರಿಸಬೇಕು, ವಿದ್ಯಾರ್ಥಿ ಪರವಾದ ಹೊಸ ಸುತ್ತೋಲೆಯನ್ನು ಹೊರಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡುವ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.