ಜು.13 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಆರಂಭ

July 9, 2020

ಮಡಿಕೇರಿ ಜು. 9 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನವು ಜುಲೈ, 13 ರಿಂದ ಒಂದು ವಾರಗಳ ಕಾಲ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ತಿಳಿಸಿದ್ದಾರೆ.
ಜಿಲ್ಲೆಯ ಆರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, 6 ಮಂದಿ ಜಂಟಿ ಮೌಲ್ಯಮಾಪಕರು, 6 ಮಂದಿ ವ್ಯವಸ್ಥಾಪಕರು, 74 ಮಂದಿ ಮುಖ್ಯ ಮೌಲ್ಯಮಾಪಕರು ಸೇರಿದಂತೆ 650 ಮಂದಿ ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ ಎಂದು ಪಿ.ಎಚ್.ಮಚ್ಚಾಡೋ ಅವರು ಹೇಳಿದ್ದಾರೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮೋ ಸ್ಕ್ಯಾನ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ/ ಅನುದಾನಿತ/ ಖಾಸಗಿ ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಿಂದ 2019-20 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಕೋವಿಡ್-19 ರ ಸಂದರ್ಭದಲ್ಲಿ ಪೂರ್ಣಗೊಳಿಸಲಾಗಿದೆ.
ಈಗ ಮುಂದಿನ ಹಂತ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಪ್ರತಿಮ ಧೈರ್ಯದಿಂದ ಒಳ್ಳೆಯ ಹಾಜರಾತಿ ಪಡೆದಿದ್ದೇವೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಕೆಲವು ವಿನಾಯಿತಿಗಳನ್ನು ಸಹಾಯಕ ಮೌಲ್ಯಮಾಪಕರಿಗೆ ನೀಡಿದ್ದರೂ ಅದನ್ನು ನೆಪವಾಗಿಸದೆ, ಎಲ್ಲರೂ ಮೌಲ್ಯಮಾಪನ ಕಾರ್ಯದಲ್ಲಿ ಧೈರ್ಯವಾಗಿ ಭಾಗಿಯಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಡೊ ಅವರು ತಿಳಿಸಿದ್ದಾರೆ.
ಸಾವಿರಾರು ಮಕ್ಕಳಲ್ಲಿ ಧೈರ್ಯ ತುಂಬಿದ ಶಿಕ್ಷಕರು, ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಂಡು ಮಕ್ಕಳು ತೋರಿದ ಧೈರ್ಯಕ್ಕೆ, ವಿಶ್ವಾಸಕ್ಕೆ ಗೌರವ ತೋರಿಸಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವ ಸುರಕ್ಷತೆಗೆ ಆದ್ಯತೆ ನೀಡಿ ಮೌಲ್ಯಮಾಪನ ಕಾರ್ಯದಲ್ಲಿ ಅನುಪಾಲನೆಯೊಂದಿಗೆ ಪಾಲ್ಗೊಳ್ಳಬೇಕಿದೆ. ಮೌಲ್ಯಮಾಪನ ಕಾರ್ಯದಲ್ಲಿ ಸಕ್ರಿಯತೆ ಕೋವಿಡ್-19 ಒಡ್ಡಿರುವ ಸವಾಲಿಗೆ ಉತ್ತರವಾಗಿ ನಿಲ್ಲಲಿ.
ಮೌಲ್ಯಮಾಪನದ ಕಾರ್ಯ ಕೈಗೊಂಡು ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯವಿದ್ದು, ಜುಲೈ 13 ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನದಲ್ಲಿ ಹಾಜರಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ ಅವರು ಹೇಳಿದ್ದಾರೆ.