ಬೆಮ್ಮತ್ತಿ ಗುಂಪು ಹಲ್ಲೆ ಪ್ರಕರಣ : ರಾಜಿ ಸಂಧಾನದ ಮೂಲಕ ಸುಖಾಂತ್ಯ

09/07/2020

ಪೊನ್ನಂಪೇಟೆ, ಜು.09: ಮಾಯಮುಡಿ ಸಮೀಪದ ಧನುಗಾಲ-ಬೆಮ್ಮತ್ತಿ ಗ್ರಾಮದಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರಿದಿದ್ದ ವಿವಾದ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ. ಇದರಿಂದ ಜಿಲ್ಲೆಯಲ್ಲೇ ಸುದ್ದಿಯಾಗಿದ್ದ ಜೂನ್ 6ರ ಬೆಮ್ಮತ್ತಿ ಗುಂಪು ಹಲ್ಲೆ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.

ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರಾದ ನಾಪೋಕ್ಲಿನಲ್ಲಿ ಪಿ.ಎಂ.ಖಾಸಿಂ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ.ಎ.ಯಾಕೂಬ್, ಮಾಜಿ ಅಧ್ಯಕ್ಷರಾದ ನಾಪೋಕ್ಲಿನ ಎಂ.ಎಚ್.ಅಬ್ದುಲ್ ರಹಿಮಾನ್ ಮತ್ತು ಹೆಚ್.ಎ. ಹಂಸ ಕೊಟ್ಟಮುಡಿ ಅವರ ನೇತೃತ್ವದ ಹಿರಿಯರ ಸಮಿತಿಯು ಗುರುವಾರದಂದು ಬೆಮ್ಮತ್ತಿಯ ಮದರಸ ಸಭಾಂಗಣದಲ್ಲಿ ಸಭೆ ಸೇರಿ ಉಭಯ ಗುಂಪಿನವರೊಂದಿಗೆ ಮಾತುಕತೆ ನಡೆಸಿದ ನಂತರ ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಕೆಟ್ಟ ಗಳಿಗೆಯಲ್ಲಿ ಆಗುವ ಯಾವುದೇ ಘಟನೆಯನ್ನು ನಂತರ ಮುಂದುವರಿಸುವುದು ಜನರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಹಲ್ಲೆ, ವ್ಯಕ್ತಿವೈರಾಗ್ಯ, ದ್ವೇಷ ಸಾಧನೆಯಿಂದ ಯಾರು ಕೂಡ ಏನನ್ನು ಗಳಿಸಲಾರರು. ಅಲ್ಲದೆ ವ್ಯಕ್ತಿ ವೈಷಮ್ಯವನ್ನು ಮುಂದುವರಿಸುತ್ತಾ ಗ್ರಾಮದಲ್ಲಿ ನಿರಂತರ ಸಂಘರ್ಷ ನಡೆಸುವುದನ್ನು ಇಂದಿನ ಮುಂದುವರಿದ ಸಮಾಜ ಒಪ್ಪಿಕೊಳ್ಳುವುದಿಲ್ಲ. ಇದರಿಂದ ಸಮಾಜದಲ್ಲಿ ವ್ಯಕ್ತಿಗಳ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಸಂಧಾನ ಸಭೆಯನ್ನು ನಿಯಂತ್ರಿಸಿದ ನಾಪೋಕ್ಲಿನಲ್ಲಿ ಎಂ.ಎಚ್. ಅಬ್ದುಲ್ ರಹಿಮಾನ್ ಅವರು ಎಚ್ಚರಿಸಿದರು.

ಒಂದೇ ಗ್ರಾಮದಲ್ಲಿ ಗುಂಪುಗಾರಿಕೆ ಸೃಷ್ಟಿಯಾದರೆ ಹೊರಗಿನ ಕೆಲವು ಸ್ವಹಿತಾಶಕ್ತಿಗಳು ಇದರ ದುರುಪಯೋಗದ ಲಾಭವನ್ನು ಪಡೆಯಲು ಕಾದಿರುತ್ತಾರೆ. ಇದಕ್ಕಾಗಿ ಎರಡೂ ಕಡೆಯವರನ್ನು ಪ್ರಚೋದಿಸುತ್ತಾ ವಿವಾದವನ್ನು ಮುಂದುವರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದಕ್ಕೆ ಅವಕಾಶ ನೀಡಿದರೆ ಗ್ರಾಮದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಅದರಿಂದ ಇದನ್ನು ಅರಿತುಕೊಂಡು ಗ್ರಾಮದಲ್ಲಿ ಸಹೋದರತೆಯಿಂದ ಮುನ್ನಡೆಯುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಉಭಯ ಕಡೆಯವರು ವಿವಾದವನ್ನು ಸುಖಾಂತ್ಯಗೊಳಿಸಲು ಮನಸಾರೆ ಒಪ್ಪಿಕೊಳ್ಳಬೇಕು. ಇನ್ನು ಮುಂದೆ ಗ್ರಾಮದಲ್ಲಿ ‘ಎರಡು ಗುಂಪು’ ಎಂಬುದು ಇರಲೇಬಾರದು ಎಂದು ಅಬ್ದುಲ್ ರಹಿಮಾನ್ ಅವರು ಹೇಳಿದರು.

ನಂತರ ಸಂಧಾನ ಸಭೆಯಲ್ಲಿ ವಿವಿಧ ರೀತಿಯ ಅಹವಾಲು ಮಂಡಿಸಿದ ಗ್ರಾಮಸ್ಥರು, ಹಿಂದಿನ ಘಟನೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಮಾತನಾಡಿದರು. ಎಲ್ಲರ ಅಹವಾಲುಗಳನ್ನು ಆಲಿಸಿದ ನಂತರ ಮಾತನಾಡಿದ ಸಂಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ.ಎ. ಯಾಕೂಬ್ ಅವರು ಸಂಧಾನ ಸೂತ್ರಗಳನ್ನು ಪ್ರಕಟಿಸಿದರು.

ಬೆಮ್ಮತ್ತಿ ಜಮಾಅತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಹಿಂದಿನ ಹಲ್ಲೆ ಪ್ರಕರಣವನ್ನು ಮುಂದುವರಿಸುವ ಯಾವುದೇ ರೀತಿಯ ದೂರುಗಳೊಂದಿಗೆ ಗ್ರಾಮದವರು ಯಾರೂ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಬಾರದು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ 10 ಜನರ ಮೇಲೆ ದಾಖಲಾಗಿದ್ದ ಕೊಲೆಯತ್ನ ಮೊಕದ್ದಮೆ ಯನ್ನು ನ್ಯಾಯಾಲಯದಲ್ಲಿ ಪರಸ್ಪರ ವಾಪಸ್ಸು ಪಡೆಯಬೇಕು. ಇದಕ್ಕಾಗಿ ವಕೀಲರ ಮೂಲಕ ಅಗತ್ಯ ವ್ಯವಹಾರ ನಡೆಸಬೇಕು. ಇನ್ನುಳಿದ ಎಲ್ಲಾ ಮೊಕದ್ದಮೆಗಳನ್ನು ಕಾನೂನಿನಂತೆ ಪ್ರಾಥಮಿಕ ಹಂತದಲ್ಲೇ ವಾಪಸ್ಸು ಪಡೆಯಬೇಕು. ಗ್ರಾಮದ ವಿವಿಧ ವಿಚಾರಗಳಲ್ಲಿ ಮಹಿಳೆಯರು ಮಧ್ಯಪ್ರವೇಶಿಸಿ ಅನಗತ್ಯ ವಿವಾದಗಳನ್ನು ಹುಟ್ಟುಹಾಕಬಾರದು. ಹಿಂದಿನ ಕಹಿ ಘಟನೆಗಳನ್ನು ಮರೆತು ಗ್ರಾಮದಲ್ಲಿ ಐಕ್ಯತೆ ಮತ್ತು ಸಹೋದರತೆ ಪುನಸ್ಥಾಪಿಸಲು ಮತ್ತು ಒಗ್ಗಟ್ಟು ಮೂಡಿಸಲು ಎಲ್ಲರೂ ಪ್ರಾಮಾಣಿಕವಾಗಿ ಬದ್ಧರಾಗಿರಬೇಕು. ಮುಂದೆ ಗ್ರಾಮದಲ್ಲಿ ತಲೆದೂರುವ ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಎಲ್ಲರೂ ಪರಸ್ಪರ ಮುಕ್ತ ಮಾತುಕತೆಯ ಮೂಲಕ ಬಗೆಹರಿಸಿ ಗ್ರಾಮದ ಗೌರವ ಕಾಪಾಡುವ ಜವಾಬ್ದಾರಿ ಹೊರಬೇಕು ಎಂದು ಲಿಖಿತ ರೂಪದ ಸಂಧಾನ ಸಭೆಯ ತೀರ್ಮಾನವನ್ನು ಕೆ.ಎ.ಯಾಕೂಬ್ ಅವರು ವಿವರಿಸಿದರು. ನಂತರ ಸಂಧಾನ ಸಭೆಯ ತೀರ್ಮಾನ ಪತ್ರಕ್ಕೆ ಗ್ರಾಮಸ್ಥರು ಸಹಿ ಹಾಕುವ ಮೂಲಕ ಒಪ್ಪಿಗೆ ಸೂಚಿಸಿದರು ಕೊನೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಕಳೆದುಹೋದ ಘಟನೆಗಾಗಿ ಪರಸ್ಪರ ಕ್ಷಮೆಕೋರಿ ನಿರ್ಗಮಿಸಿದರು.

ಸಂಧಾನ ಸಭೆಯಲ್ಲಿ ಬೆಮ್ಮತ್ತಿ ಜುಮಾ ಮಸೀದಿಯ ಖತೀಬರಾದ ನೌಶಾದ್ ಫೈಝಿ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರಾದ ಹಂಸ ಪಡಿಯಾಣಿ, ಗೋಣಿಕೊಪ್ಪಲಿನ ಅಬ್ದುಲ್ ಸಮದ್, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಆಲೀರ ಎಂ.ರಶೀದ್, ಹಾಕತ್ತೂರು ಜುಮಾ ಮಸೀದಿಯ ಕಾರ್ಯದರ್ಶಿ ಖಾಲಿದ್, ಯೂಸುಫ್ ಎಮ್ಮೆಮಾಡು, ವಕೀಲ ಸಮೀರ್, ಪತ್ರಕರ್ತ ರಫೀಕ್ ತೂಚಮಕೇರಿ, ಗೋಣಿಕೊಪ್ಪಲು ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರಾದ ನಂಜಪ್ಪ, ಬೆಮ್ಮತ್ತಿ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಮಾಜಿ ಅಧ್ಯಕ್ಷರಾದ ಪಿ. ಮೊಹಮ್ಮದ್ ಮೊದಲಾದವರಿದ್ದರು. ಮೊದಲಿಗೆ ನೌಶಾದ್ ಫೈಝಿ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು. ಅಲಿ ಝೈನಿ ಸ್ವಾಗತಿಸಿದರು. ಖಾಲಿದ್ ಹಾಕತ್ತೂರು ವಂದಿಸಿದರು.