ಮಡಿಕೇರಿ ನಗರಸಭೆಯಿಂದ ದುಪಟ್ಟು ಆಸ್ತಿ ತೆರಿಗೆ ಹಿಂದಕ್ಕೆ : ನಗರಸಭಾ ಆಯುಕ್ತ ಶ್ರೀನಿವಾಸ್ ಸ್ಪಷ್ಟನೆ

09/07/2020

ಮಡಿಕೇರಿ, ಜು. 9: ಮಡಿಕೇರಿ ನಗರ ಸಭೆಯಿಂದ 2020-21ನೇ ಸಾಲಿನಲ್ಲಿ ವಿಧಿಸಲಾಗಿದ್ದ ದುಪಟ್ಟು ಆಸ್ತಿ ತೆರಿಗೆಯನ್ನು ಹಿಂದಕ್ಕೆ ಪಡೆಯಲಾಗುವುದೆಂದು ನಗರಸಭಾ ಆಯುಕ್ತ ಶ್ರೀನಿವಾಸ್ ಸ್ಪಷ್ಟಪಡಿಸಿದರು.
ಈ ಸಾಲಿನಲ್ಲಿ ವಾಣಿಜ್ಯೋದ್ಯಮಿಗಳ ಹಳೇ ಕಟ್ಟಡಗಳು ಸೇರಿದಂತೆ ನೂರಾರು ಮಂದಿಯ ಡಿಮಾಂಡ್ ನೋಟೀಸ್‍ನಲ್ಲಿ ಅನಧಿಕೃತ ಕಟ್ಟಡವೆಂದು ನಮೂದಿಸಿ ದುಪ್ಪಟ್ಟು ತೆರಿಗೆ ವಿಧಿಸಲಾಗಿತ್ತು. 1955 ರಿಂದಲೇ ಇರುವ ಕಟ್ಟಡಗಳಿಗೂ ಕೊರೊನಾ ಸಂದರ್ಭದಲ್ಲಿ ನಗರಸಭೆ ತೆರಿಗೆ ಶಾಕ್ ನೀಡಿತ್ತು. ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿತ್ತಾದರೂ ಸ್ಪಂದನವಿರಲಿಲ್ಲ. ಅಂತಿಮವಾಗಿ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವದಾಗಿಯೂ ತಿಳಿಸಿದ್ದರು. ಇದೇ ವೇಳೆ ನಗರ ಚೇಂಬರ್ – ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೋರಿತ್ತು.
ಇಂದು ನಗರಸಭೆಯ ಆಯುಕ್ತ ಶ್ರೀನಿವಾಸ್ ಅವರು ಮೂಡಾ ಅಧಿಕಾರಿ ಅಫ್ಸರ್ ಅಹ್ಮದ್, ನಗರಸಭಾ ವ್ಯವಸ್ಥಾಪಕ ತಾಹಿರ್, ಮಡಿಕೇರಿ ನಗರ ಚೇಂಬರ್ ಅಧ್ಯಕ್ಷ ಧನಂಜಯ್, ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಇವರುಗಳೊಂದಿಗೆ ಸಭೆ ನಡೆಸಿದರು. ದುಪ್ಪಟ್ಟು ತೆರಿಗೆ ವಿಧಿಸಿರುವದು ಕಾನೂನಿನ ನಿಯಮಾನುಸಾರ ಇಲ್ಲ ಎಂದು ಚಿದ್ವಿಲಾಸ್ ಸಭೆಯ ಗಮನಕ್ಕೆ ತಂದರು. ದೀರ್ಘ ಚರ್ಚೆಯ ಬಳಿಕ ಹಿಂದಿನ ಆದೇಶವನ್ನು ಬದಲಿಸಿ ಅನಧಿಕೃತ ಕಟ್ಟಡವೆಂಬ ಕಾರಣದಿಂದ ವಿಧಿಸಲಾಗುತ್ತಿದ್ದ ದುಪ್ಪಟ್ಟು ತೆರಿಗೆಯನ್ನು ರದ್ದು ಪಡಿಸುವದಾಗಿ ಪೌರಾಯುಕ್ತ ಶ್ರೀನಿವಾಸ್ ಪ್ರಕಟಿಸಿದರು.
ತೆರಿಗೆದಾರರು ಜುಲೈ ಅಂತ್ಯದೊಳಗೆ ತೆರಿಗೆ ಪಾವತಿಸಿ ಶೇ.5ರ ರಿಯಾಯಿತಿ ಪಡೆಯುವಂತೆಯೂ ಮನವಿ ಮಾಡಿದರು. ಈಗಾಗಲೇ ದುಪ್ಪಟ್ಟು ತೆರಿಗೆ ಪಾವತಿಸಿರುವವರು ಮನವಿ ಸಲ್ಲಿಸಿದಲ್ಲಿ ಪರಿಶೀಲಿಸಿ ಮುಂದಿನ ಸಾಲಿಗೆ ಅದನ್ನು ಕಡಿಮೆ ಮಾಡುವದಾಗಿಯೂ ಭರವಸೆ ನೀಡಿದರು.
ತೆರಿಗೆದಾರರಿಗೆ ಕಾನೂನಿನಂತೆ ನೀಡಬೇಕಾದ ಸವಕಳಿಯನ್ನು ನೀಡದ ಬಗ್ಗೆ ಚೇಂಬರ್ ಗಮನ ಸೆಳೆಯಿತು. ಗಣಕೀಕೃತ ವ್ಯವಸ್ಥೆಯಲ್ಲಿ 2005ರವರೆಗೆ ಮಾತ್ರ ಲೆಕ್ಕ ಹಾಕುತ್ತಿದೆ ಎಂದು ಆಯುಕ್ತರು ಹೇಳಿದರೆ, ಹೊಸ ಕಟ್ಟಡಗಳಿಗೆ 10 ವರ್ಷದವರೆಗೆ ಸವಕಳಿ ನೀಡದಂತೆ ಮೌಖಿಕ ಆದೇಶ ಬಂದಿದೆ ಎಂದು ವ್ಯವಸ್ಥಾಪಕ ತಾಹೀರ್ ವಿವರಿಸಿದರು. ಇದಕ್ಕೆ ಚೇಂಬರ್ ಪದಾಧಿಕಾರಿಗಳು ವಿರೋಧಿಸಿ ಕೇಂದ್ರ ಕಚೇರಿಯಿಂದ ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.
ಆಸ್ತಿ ತೆರಿಗೆ ಹೆಚ್ಚಳ ಸಂದರ್ಭ ಹಿಂದಿನ ಮೂರು ವರ್ಷಗಳ ಹೆಚ್ಚಳದ ದರಕ್ಕೆ ತೆರಿಗೆ ವಿಧಿಸುತ್ತಿರುವದರ ಬಗ್ಗೆ ಕೂಡಾ ನಗರಸಭೆ ಗಮನ ಹರಿಸಲು ಮನವಿ ಮಾಡಲಾಯಿತು.
ವ್ಯಾಪಾರ ಪರವಾನಗಿ ಪತ್ರ ಪಡೆಯಲು ಸರ್ಕಾರ ನಿಗಧಿಪಡಿಸಿರುವ ದರ ಕೇವಲ 500 ಇದ್ದರೂ, ನಗರಸಭೆ ಬೇಕಾಬಿಟ್ಟಿ ವಸೂಲಿ ಮಾಡುತ್ತಿದೆ ಎಂದು ಚೇಂಬರ್ ಆರೋಪಿಸಿತು. ಈ ಬಗ್ಗೆ ಅಧಿಕಾರಿ ರಮೇಶ್ ಅವರಿಂದ ಆಯುಕ್ತರು ಸ್ಪಷ್ಟನೆ ಬಯಸಿದಾಗ ನಗರಸಭೆ ಹಿಂದೆ ಸಭೆ ಸೇರಿ ಈ ಶುಲ್ಕ ವಿಧಿಸಿದೆ ಎಂದರು. ಆದರೆ ಬೈಲಾ ಇಲ್ಲದ ನಗರಸಭೆಯ ಇಂತಹ ತೀರ್ಮಾನ ಅಸಿಂಧು ಎಂದು ನ್ಯಾಯಾಲಯ ತೀರ್ಪು ನೀಡಿರುವದನ್ನು ಆಯುಕ್ತರ ಗಮನಕ್ಕೆ ತರಲಾಯಿತು. ಈ ಬಗ್ಗೆ ತುರ್ತಾಗಿ ಚರ್ಚಿಸುವದಾಗಿಯೂ ಆಯುಕ್ತರು ನುಡಿದರು.