ಅಕ್ರಮ ಶ್ರೀಗಂಧದ ಮರ ಸಾಗಾಟಕ್ಕೆ ಯತ್ನ : ಆರೋಪಿ ಬಂಧನ

09/07/2020

ಮಡಿಕೇರಿ ಜು. 9 : ಸೋಮವಾರಪೇಟೆ ಮೀಸಲು ಅರಣ್ಯದಿಂದ ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣವನ್ನು ಬೇಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು, 5ಲಕ್ಷ ರೂ.ಮೌಲ್ಯದ ಮರ ಹಾಗೂ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಹೆಬ್ಬಾಲೆ ಸಮೀಪದ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಶಾಲನಗರ ಸಮೀಪದ ದೊಡ್ಡಹೊನ್ನೂರು ಕೊಪ್ಪಲು ಗ್ರಾಮದ ಯೂಸುಫ್ ಬಂಧಿತ ಆರೋಪಿ. ಪಿರಿಯಾಪಟ್ಟಣ ತಾಲೂಕಿನ ಬಯಲುಕೊಪ್ಪ ಹಂದಿಗುಡ್ಡ ಗ್ರಾಮದ ಚಿಕ್ಕಲಕ್ಷ್ಮಣ, ಚಂದು, ದೊಡ್ಡಸ್ವಾಮಿ, ಹಮ್ಮಿಗೆ ಗ್ರಾಮದ ಬಸವರಾಜು ತಲೆ ಮರೆಸಿಕೊಂಡಿದ್ದಾರೆ.
ಬುಧವಾರ ರಾತ್ರಿ ಮರಗಳ್ಳರ ತಂಡ ಹತಾರಗಳೊಂದಿಗೆ ಜೇನುಕಲ್ಲುಬೆಟ್ಟ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರಗಳನ್ನು ಕಡಿದು, ಕೊರಡುಗಳನ್ನಾಗಿ ಪರಿವರ್ತಿಸಿ, ಕಾರಿಗೆ ತುಂಬಿಸುತ್ತಿದ್ದ ಸಂದರ್ಭ ಸೋಮವಾರಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ದಾಳಿ ಮಾಡಿದೆ. ನಾಲ್ವರು ಆರೋಪಿಗಳು ಅರಣ್ಯದೊಳಗೆ ತಪ್ಪಿಸಿಕೊಂಡಿದ್ದಾರೆ. ಕಳ್ಳತನಕ್ಕೆ ಬಳಸಿದ್ದ 10ಲಕ್ಷ ರೂ, ಮೌಲ್ಯದ ಕೇರಳ ರಾಜ್ಯದ ನೋಂದಣಿಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರಿನ ಮಾಲೀಕರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆರ್.ಎಫ್.ಒ. ಕೆ.ಕೊಟ್ರೇಶ್ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಚರಣೆಯಲ್ಲಿ ಎಸಿಎಫ್ ಕೆ.ಎ.ನೆಹರು ಮಾರ್ಗದರ್ಶನದಲ್ಲಿ ಆರ್.ಎಫ್.ಒ. ಕೊಟ್ರೇಶ್, ಡಿ.ಆರ್.ಎಫ್.ಒ ಎಂ.ಕೆ.ಭರತ್, ರಕ್ಷಕರಾದ ಲೋಕೇಶ್, ಶ್ರೀಕಾಂತ್, ವೀಕ್ಷಕರಾದ ರಾಜಪ್ಪ, ಸಿಬ್ಬಂದಿಗಳಾದ ಶಿವಪ್ಪ, ವರುಣ್ ಭಾಗವಹಿಸಿದ್ದರು.