ಜಿಲ್ಲಾ ಪಿಗ್ಮಿ ಸಂಗ್ರಹಕಾರರ ಸಂಘ ಅಸ್ತಿತ್ವಕ್ಕೆ

ಮಡಿಕೇರಿ ಜು.9 : ಕೊಡಗು ಜಿಲ್ಲಾ ವ್ಯಾಪ್ತಿಯ ವಿವಿಧ ಬ್ಯಾಂಕ್‍ಗಳ ಪಿಗ್ಮಿ ಸಂಗ್ರಹಕಾರರ ಏಳಿಗೆ ಮತ್ತು ಮೂಲಭೂತ ಸಮಸ್ಯೆಗಳ ಬಗೆಹರಿಕೆಯ ನಿಟ್ಟಿನಲ್ಲಿ ‘ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಕಾರರ ಸಂಘ’ ಅಸ್ತಿತ್ವಕ್ಕೆ ಬಂದಿದ್ದು, ಸ್ಥಾಪಕ ಅಧ್ಯಕ್ಷರಾಗಿ ಎಂ.ಡಿ.ನಾಣಯ್ಯ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ನಾಣಯ್ಯ, ಪಿಗ್ಮಿ ಸಂಗ್ರಹಕಾರರು ಎದುರಿಸುತ್ತಿರುವ ಸಂಕಷ್ಟಗಳ ನಿವಾರಣೆಯ ಮೂಲಕ ಅವರ ಬದುಕನ್ನು ಉತ್ತಮ ಪಡಿಸುವ ಸದುದ್ದೇಶದಿಂದ ಸಂಘವನ್ನು ರಚಿಸಲಾಗಿದೆ. ಪ್ರಸ್ತುತ 87 ಮಂದಿ ಸದಸ್ಯರುಗಳನ್ನು ಹೊಂದಿರುವುದಾಗಿ ಮಾಹಿತಿ ನೀಡಿದರು.
::: ಆಡಳಿತ ಮಂಡಳಿ :::
ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಕಾರರ ಸಂಘದ ಉಪಾಧ್ಯಕ್ಷರಾಗಿ ಯು.ಎ. ಚಂದ್ರಶೇಖರ್,ಕಾರ್ಯದರ್ಶಿಯಾಗಿ ಪಿ.ಎ. ಮಂಜುನಾಥ, ಸಹ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ಆರ್. ಶೆಟ್ಟಿ, ಖಜಾಂಚಿಯಾಗಿ ಬಿ.ಪಿ. ರಾಮಚಂದ್ರ, ಸಹ ಖಜಾಂಚಿಯಾಗಿ ಫಾತಿಮ ಎನ್.ಪಿ., ಸಂಚಾಲಕರಾಗಿ ಬಿ.ಕೆ.ಸೀತಾರಾಮ ರೈ, ಸಲಹೆಗಾರರಾಗಿ ಜಯಪ್ರಕಾಶ್ ಎಂ.ಪಿ., ನಿರ್ದೇಶಕರುಗಳಾಗಿ ಎ.ಸಿ. ಮೊಣ್ಣಪ್ಪ, ವಿ.ಎಲ್. ವಿಶ್ವನಾಥ್, ಎಂ.ಹೆಚ್.ಜಯಂತಿ, ಎಂ.ಡಿ. ಮಂಜುನಾಥ್, ಬಿ.ಪಿ. ಆನಂದ, ವಿ.ಜೆ. ಟೋನಿ, ಬಿ.ಕೆ. ಚಂದ್ರಶೇಖರ್, ವಿ.ಎಸ್. ಮನು ಕುಮಾರ್, ಮಧು ಸೂದನ್ ಪಿಳಕಲ್, ಎಂ.ಇ. ಸುಲೈಮಾನ್ ಮತ್ತು ಎಚ್.ಡಿ. ಜ್ಯೋತಿ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ತಿಳಿಸಿದರು.
ಸಂಘದ ಮೂಲಕ ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳ ಪಿಗ್ಮಿ ಏಜೆಂಟರ ಏಳಿಗೆಗಾಗಿ ಶ್ರಮಿಸುವುದು, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರವಾಗುವಂತೆ ಪ್ರೋತ್ಸಾಹ ಧನ ನೀಡುವುದು, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವುದು, ಸಂಘದ ಸದಸ್ಯರುಗಳ ಸಮಸ್ಯೆಗಳಿಗೆ ಸ್ಪಂದಿಸುವುದು ಸೇರಿದಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ತಮ್ಮದೆಂದು ನಾಣಯ್ಯ ಹೇಳಿದರು.
ಜಿಲ್ಲಾ ವ್ಯಾಪ್ತಿಯ ವಿವಿಧ ಬ್ಯಾಂಕ್‍ಗಳಲ್ಲಿ ಪಿಗ್ಮಿ ಹಣ ಕಟ್ಟುತ್ತಿರುವ ಗ್ರಾಹಕರು ಸಾಲವನ್ನು ಪಡೆಯುತ್ತಿದ್ದು, ಇದಕ್ಕೆ ಬ್ಯಾಂಕ್ ಇಬ್ಬರು ವ್ಯಕ್ತಿಗಳ ಜಾಮೀನನ್ನು ಪಡೆದುಕೊಳ್ಳುತ್ತದೆ. ಹೀಗಿದ್ದೂ ಗ್ರಾಹಕರು ಸಾಲ ಪಾವತಿಸದಿದ್ದಲ್ಲಿ, ಅದಕ್ಕೆ ಬದಲಾಗಿ ಪಿಗ್ಮಿ ಸಂಗ್ರಹಕಾರರ ತಿಂಗಳ ಕಮಿಷನ್ನಿನಲ್ಲಿ ಶೇ.50 ರಷ್ಟು ಮೊತ್ತವನ್ನು ಮುರಿದುಕೊಳ್ಳಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಕೊರೊನಾ ಮಹಾಮಾರಿಯಿಂದ ವ್ಯಾಪಾರ ವಹಿವಾಟುಗಳು ಕುಸಿಯುವುದರೊಂದಿಗೆ ಪಿಗ್ಮಿ ಸಂಗ್ರಹಾತಿಯ ಪ್ರಮಾಣವು ಕುಸಿದಿದೆ. ಇಂತಹ ಸಂಕಷ್ಟದ ಅವಧಿಯಲ್ಲಿ ಬ್ಯಾಂಕ್‍ಗಳು ಸಾಲ ವಸೂಲಾತಿಗಾಗಿ ಪಿಗ್ಮಿ ಏಜೆಂಟರ ಮಾಸಿಕ ಕಮಿಷನ್ ಹಣವನ್ನು ಮುರಿದುಕೊಳ್ಳುವುದು ಸರಿಯಲ್ಲ. ಸಾಲ ಮರುಪಾವತಿಸದ ಗ್ರಾಹಕರ ವಿರುದ್ಧ ಇಲ್ಲವೆ ಅವರು ನೀಡಿರುವ ಜಾಮೀನುದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕು ಬಾಂಕ್‍ಗಳು ಪಿಗ್ಮಿ ಸಂಗ್ರಹಕಾರರ ಮಾಸಿಕ ಕಮಿಷನ್ ಕಡಿತಗೊಳಿಸಬಾರದು ಎಂದು ನಾಣಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಯು.ಇ.ಚಂದ್ರಶೇಖರ್, ಖಜಾಂಚಿ ಬಿ.ಪಿ. ರಾಮಚಂದ್ರ, ಸಹ ಖಜಾಂಚಿ ಫಾತಿಮಾ ಎನ್.ಪಿ., ಸಲಹೆಗಾರ ಜಯಪ್ರಕಾಶ್ ಎಂ.ಪಿ. ಹಾಗೂ ನಿರ್ದೇಶಕ ವಿ.ಎಸ್.ಮನು ಕುಮಾರ್ ಉಪಸ್ಥಿತರಿದ್ದರು.
