ಪೆಟ್ರೋಲ್, ಡಿಸೇಲ್ ಬೆಲೆ‌ ಏರಿಕೆ: ಜಿಲ್ಲಾ ಎನ್.ಎಸ್.ಯು.ಐ. ಖಂಡನೆ

10/07/2020

ಮಡಿಕೇರಿ ಜು.10 : ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವುದರ ಮೂಲಕ ಜನರ ಬದುಕಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದೆ. ದೇಶದ ಜನತೆ ಈಗಾಗಲೇ ಕೊರೊನಾ ಸಂಕಷ್ಟದಿಂದ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ನಿರಂತರವಾಗಿ ಇಂಧನಗಳ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಕೊಡಗು ಜಿಲ್ಲಾ ಎನ್.ಎಸ್.ಯು.ಐ ಘಟಕದ ಉಪಾಧ್ಯಕ್ಷ ಅಬ್ದುಲ್ ರಾಶಿದ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಏರಿಕೆ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಮರೆತ್ತಿದೆ. ಇತ್ತ ಉದ್ಯೋಗ ಸೃಷ್ಟಿಯೂ ಇಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣ ಕೂಡಾ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ರಾಶಿದ್ ಆರೋಪಿಸಿದರು.

ಕೊರೊನಾ ವೈರಸ್ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆ ನೆಲಕಚ್ಚಿದೆ. ಬಡ, ಮಧ್ಯಮ ವರ್ಗದ ಜನರು ಕೆಲಸವಿಲ್ಲದೆ ದಿನ ಕಳೆಯುತ್ತಿದ್ದಾರೆ. ಯುವಜನತೆ ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ತೀವ್ರವಾಗಿ ಕುಸಿದಿದೆ. ಕೊರೊನಾದಂತಹ ಕಷ್ಟ ದಿನಗಳಲ್ಲಿ ಕೇಂದ್ರ ಸರ್ಕಾರ ಮನಸ್ಸಿಗೆ ಬಂದಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುತ್ತಿದೆ.

ಪೆಟ್ರೋಲ್, ಡಿಸೇಲ್ ದರವನ್ನು ಕೂಡಲೆ ಕಡಿಮೆಗೊಳಿಸಿ, ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡ ಹಾಗೂ ಮಧ್ಯಮ ವರ್ಗ ಸೇರಿ ದೇಶದ ಎಲ್ಲ ಜನರಿಗೆ ಆರ್ಥಿಕ ಭದ್ರತೆಯ ವಾತಾವರಣ ಸೃಷ್ಟಿಸಬೇಕೆಂದು ಜಿಲ್ಲಾ ಎನ್.ಎಸ್.ಯು.ಐ ಉಪಾಧ್ಯಕ್ಷ ರಾಶಿದ್ ಅಯ್ಯಂಗೇರಿ ಒತ್ತಾಯಿಸಿದ್ದಾರೆ.