ಮಡಿಕೇರಿಯಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್

10/07/2020

ಮಡಿಕೇರಿ ಜು.10 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.26ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಕಾರ್ಯನಿರ್ವಹಿಸಲು ಮತ್ತು ಜು.18 ಹಾಗೂ 25ರ ಶನಿವಾರ ಕಡ್ಡಾಯವಾಗಿ ಲಾಕ್‍ಡೌನ್ ಮಾಡಲು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಚೇಂಬರ್‍ನ ನಗರಾಧ್ಯಕ್ಷ ಎಂ.ಧನಂಜಯ್ ಅವರು, ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಅತ್ಯಧಿಕ ಎನ್ನುವಷ್ಟರ ಮಟ್ಟಿಗೆ ಸೋಂಕು ಪ್ರಕರಣಗಳು ವ್ಯಾಪಿಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಸೋಮವಾರದಿಂದ-ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ ಸಾಯಂಕಾಲ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಾಗುವುದು ಹಾಗೂ ಜು.18 ಮತ್ತು 25ರ ಶನಿವಾರ ಸ್ವಯಂ ಲಾಕ್‍ಡೌನ್, ಸರ್ಕಾರದ ಆದೇಶದಂತೆ ಜು.19, 26 ರ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು. ಪ್ರತಿದಿನ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ಕಫ್ರ್ಯೂ (ಸಂಪೂರ್ಣ ನಿರ್ಬಂಧ) ನಿಯಮ ಪಾಲಿಸಲು ನಿರ್ಧರಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ನಗರದ ವರ್ತಕರು, ಸಾರ್ವಜನಿಕರು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಸ್ವ-ನಿರ್ಬಂಧಕ್ಕೊಳಗಾಗುವ ಮೂಲಕ ಚೇಂಬರ್ ಆಫ್ ಕಾಮರ್ಸ್‍ನ ಪ್ರಯತ್ನಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ನಗರ ಚೇಂಬರ್, ಜನರ ಕಾಳಜಿ ಹಾಗೂ ಬೇಡಿಕೆಯಂತೆ ಮಡಿಕೇರಿ ನಗರದ ವರ್ತಕರಿಂದ ಅಭಿಪ್ರಾಯ, ಪ್ರತಿಕ್ರಿಯೆ ನೀಡುವ ಸಲುವಾಗಿ ನಿಗದಿತ ನಮೂನೆಯನ್ನು ನೀಡಿ, ಲಿಖಿತ ರೂಪದಲ್ಲಿ, ವಾಟ್ಸಾಪ್ ಸಂದೇಶ ಹಾಗೂ ಮಾಧ್ಯಮಗಳಲ್ಲಿ 300ಕ್ಕೂ ಅಧಿಕ ವರ್ತಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಈ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಚೇಂಬರ್‍ನ ತುರ್ತು ಸಭೆಯಲ್ಲಿ ಮಂಡಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಧನಂಜಯ್ ತಿಳಿಸಿದ್ದಾರೆ.