ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಲು ದಲಿತ ಸಂಘರ್ಷ ಸಮಿತಿ ಒತ್ತಾಯ

ಮಡಿಕೇರಿ ಜು. 10 : ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಸರ್ಕಾರ ಕ್ರಮವನ್ನು ಖಂಡಿಸಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಮಹರಾಷ್ಟ್ರದ ಮುಂಬೈನ ದಾದರ್‍ನಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ವಾಸವಿದ್ದ ರಾಜಗೃಹವನ್ನು ಕೆಲವು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅವರನ್ನು ಕೂಡಲೇ ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜನಪರವಾಗಿದ್ದ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಭೂ ಸುಧಾರಣೆ ಕಾಯ್ದೆಯಲ್ಲಿರುವ ರೈತರ, ಕೃಷಿ ಕಾರ್ಮಿಕರ ಮತ್ತು ಭೂ ರಹಿತ ಬಡಜನರ ಪರವಾದ ಆಶಯಗಳನ್ನೇ ನಾಶಮಾಡಲು ಮುಂದಾಗಿರುವುದು ಖಂಡನೀಯ ಎಂದರು.
1974ರಲ್ಲಿ ದೇವರಾಜ ಅರಸರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಭೂಸುಧಾರಣೆ ಕಾಯ್ದೆಗೆ ಕೆಲವು ಮಹತ್ತರ ತಿದ್ದುಪಡಿಗಳನ್ನು ತಂದು “ಉಳುವವನೇ ಭೂ ಒಡೆಯ” ಎಂದು ಘೋಷಿಸಿದ್ದರು. ಆದರೆ ಈಗಿನ ಸರ್ಕಾರವು ತಿದ್ದುಪಡಿ ತರುತ್ತಿರುವ ಭೂ ಸುಧಾರಣೆ ಕಾಯಿದೆಯಿಂದ ಜನಸಾಮಾನ್ಯರಿಗೆ ಮತ್ತು ಬಡವರಿಗೆ ಹಾಗೂ ಕೃಷಿಕರಿಗೆ ಅನ್ಯಾಯವಾಗಲಿದ್ದು, ಈ ಕೂಡಲೇ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡುವಂತೆ ಒತ್ತಾಯಿಸಿದರು.
ಮನವಿ ಪತ್ರ ನೀಡುವ ಸಂದರ್ಭ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ. ದೀಪಕ್, ಮಡಿಕೇರಿ ನಗರ ಸಂಚಾಲಕ ಟಿ.ಪಿ. ಸಿದ್ದೇಶ್ವರ, ವಿರಾಜಪೇಟೆ ತಾಲ್ಲೂಕು ಸಂಘಟನಾ ಸಂಚಾಲಕ ಹೆಚ್.ಎಂ. ಮಹದೇವ ಹಾಜರಿದ್ದರು.
