14 ದಿನ ಲಾಕ್‍ಡೌನ್ ಗೆ ಕೊಡಗು ಜೆಡಿಎಸ್ ಒತ್ತಾಯ

10/07/2020

ಮಡಿಕೇರಿ ಜು.10 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಕೊರೊನಾ ಸಂಕ್ರಮಣ ತಡೆಗೆ ಮತ್ತೆ 14 ದಿನಗಳ ಲಾಕ್ ಡೌನ್ ಮಾಡುವಂತೆ ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಕೊರೊನಾ ಮಹಾಮಾರಿ ಜಿಲೆಯಲ್ಲಿ ವ್ಯಾಪಕವಾಗಿ ಪಸರಿಸದೆ ಇರುವ ಹಂತದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಸುಮಾರು ಎರಡೂವರೆ ತಿಂಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಆದರೆ, ಇದೀಗ ಸೋಂಕು ವ್ಯಾಪಕವಾಗಿ ಹರಡುವ ಹಂತದಲ್ಲಿ ಸರ್ಕಾರಗಳು ಮೌನ ವಹಿಸಿರುವುದು ದುರಂತವೆಂದು ವಿಷಾದಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಕೊಡಗು ಜಿಲ್ಲೆಗೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಗಡಿ ಪ್ರದೇಶದಲ್ಲಿ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿ 14 ದಿನಗಳ ಕ್ವಾರಂಟೈನ್‍ಗೆ ಕಳುಹಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಟ 14 ದಿನಗಳ ಲಾಕ್ ಡೌನ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ವಾರಾಂತ್ಯದ ಲಾಕ್ ಡೌನ್‍ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಈ ದಿನಗಳಲ್ಲು ಮಾಂಸ, ತರಕಾರಿ , ದಿನಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದೆ. ಹಾಗಿದ್ದ ಮೇಲೆ ಈ ಲಾಕ್ ಡೌನ್ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.
ಕೊರೊನಾ ಮಹಾಮಾರಿ ಹರಡುತ್ತಿರುವುದಕ್ಕು ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ಸಾವಿನಲ್ಲೂ ಲಾಭವನ್ನು ಹುಡುಕುತ್ತಿದೆ ಎಂದು ಗಣೇಶ್ ಟೀಕಿಸಿದರು.
ಕೊಡಗು ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಪಸರಿಸುತ್ತಿರುವ ಈ ದಿನಗಳಲ್ಲಿ ಜಿಲ್ಲೆಯ ಶಾಸಕರಿಬ್ಬರು ನಿಷ್ಕ್ರೀಯರಾಗಿದ್ದಾರೆ. ಹೊರ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳು ಸೀಲ್ ಡೌನ್ ಪ್ರದೇಶದ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಶ್ರಮ ವಹಿಸುತ್ತಿದ್ದರು ಕೊಡಗಿನ ಶಾಸಕರು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೆ ಮುಂದಿನ ಚುನಾವಣೆಯ ಸಿದ್ಧತೆಯಲ್ಲಷ್ಟೆ ತೊಡಗಿದ್ದಾರೆಂದು ಲೇವಡಿ ಮಾಡಿದರು.
ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಪಸರಿಸಿದ ಸಂದರ್ಭದಲ್ಲಿ ಹಲವು ಪ್ರದೇಶಗಳನ್ನು ಜಿಲ್ಲಾಡಳಿತ ಏಕಾಏಕಿ ಸೀಲ್ ಡೌನ್ ಮಾಡುತ್ತಿದೆ. ಆದರೆ, ಅಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಜಿಲ್ಲೆಯ ಶಾಸಕರುಗಳು ಕೂಡ ಈ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿಯೂ ಸಂಕಷ್ಟದಲ್ಲಿದ್ದ ಜನತೆಗೆ ದಾನಿಗಳೇ ನೆರವು ನೀಡಿದ್ದು, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಸವಲತ್ತು ಒದಗಿಸಿಲ್ಲ ಎಂದು ಗಣೇಶ್ ಆರೋಪಿಸಿದರು.
ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಕೊಡಗನ್ನು ಕೊಡಗಾಗಿ ಉಳಿಸಲು ಮುಂದಾಗಬೇಕಾಗಿದೆ. ಪ್ರಾಕೃತಿಕ ವಿಕೋಪ ಈ ಹಿಂದೆಯೂ ಜಿಲ್ಲೆಯಲ್ಲಿ ನಡೆದಿದ್ದು, 450 ಇಂಚಿಗೂ ಹೆಚ್ಚಿನ ಮಳೆಯನ್ನು ನಾವು ಕಂಡಿದ್ದೇವೆ. ಆದರೆ, ಕೆಲವು ಮಾಧ್ಯಮಗಳಲ್ಲಿ ಕೊಡಗು ಸಂಪೂರ್ಣ ನಾಶವಾಗಲಿದೆ ಎಂಬಂತೆ ಪ್ರತಿಬಿಂಬಿಸಲಾಗುತ್ತಿದ್ದು, ಇದು ಸರಿಯಲ್ಲವೆಂದ ಗಣೇಶ್, ಯಾವುದೇ ಪರಿಸ್ಥಿತಿಯಲ್ಲು ಜನ ಆತಂಕಕ್ಕೆ ಒಳಗಾಗಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಮಡಿಕೇರಿ ತಾಲ್ಲೂಕು ಕಾರ್ಯದರ್ಶಿ ಜಗದೀಶ್, ಮಡಿಕೇರಿ ನಗರ ಕಾರ್ಯದರ್ಶಿ ಪ್ರವೀಣ್ ಹಾಗೂ ನಗರಸಭೆಯ ಮಾಜಿ ಸದಸ್ಯ ಅಶ್ರಫ್ ಉಪಸ್ಥಿತರಿದ್ದರು.