ಸೋಮವಾರಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

10/07/2020

ಸೋಮವಾರಪೇಟೆ ಜು.10 : ಜನಪರ ಹಾಗು ಪ್ರಜಾಸತ್ತಾತ್ಮಕವಾಗಿರುವ ಭೂ ಸುಧಾರಣಾ ಕಾಯಿದೆ 1961ಕ್ಕೆ ಸುಗ್ರೀವಾಜ್ಞೆಯ ಮೂಲಕ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ತಿದ್ದುಪಡಿಯಿಂದ ರೈತ ಹಾಗು ಕೃಷಿ ಕಾರ್ಮಿಕರ ಆಶಯಗಳನ್ನೇ ನಾಶ ಮಾಡಲು ಹೊರಟಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿಯಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್.ಪಾಲಾಕ್ಷ ದೂರಿದರು.
ರೈತವಿರೋಧಿ ಸುಗ್ರಿವಾಜ್ಞೆಯನ್ನು ವಾಪಾಸ್ಸು ಪಡೆಯಬೇಕು. ಸರ್ಕಾರಿ ಭೂಮಿಯನ್ನು ಭೂರಹಿತ ಕೃಷಿಕರಿಗೆ ಹಾಗು ವಸತಿಹೀನರಿಗೆ ಹಂಚಬೇಕು. ಸಕ್ರಮಕ್ಕೆ ಫಾರಂ ನಂ.50,53,57 ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಬೇಕು. ಸರ್ಕಾರ ಲೀಸ್‍ಗೆ ಕೊಟ್ಟಿರುವ ಭೂಮಿಯನ್ನು ಬಿಡಿಸಿ ಭೂಹೀನರಿಗೆ ಹಂಚಬೇಕು ಸರ್ಕಾರವನ್ನು ಒತ್ತಾಯಿಸಿದರು. ತಾಲೂಕು ಶಿರಸ್ತೇದಾರ್ ಮಹೇಶ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ ಮೋಹನ್‍ಮೌರ್ಯ, ಜಯಪ್ಪ ಹಾನಗಲ್, ಎಚ್.ಜೆ.ಹನುಮಯ್ಯ, ಎಂ.ಎನ್.ರಾಜಪ್ಪ, ಎಚ್.ಎ.ನಾಗರಾಜ್,ಕೆ.ಬಿ.ರಾಜು, ಶಿವಲಿಂಗ ಮತ್ತಿತರರು ಇದ್ದರು.