ಕೊಡಗಿನಲ್ಲಿ ಮುಂದುವರಿದ ಕೊರೋನಾ ಸೋಂಕಿನ ನಾಗಾಲೋಟ : ಮತ್ತೆ 10 ಮಂದಿಗೆ ಕಾಡಿದ ಮಹಾಮಾರಿ

11/07/2020

ಮಡಿಕೇರಿ ಜು. 11 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ನಾಗಾಲೋಟ ಮುಂದುವರಿದಿದ್ದು, ಶನಿವಾರ ಮತ್ತೆ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141ಕ್ಕೇ ಏರಿಕೆಯಾಗಿದ್ದು, 122 ಪ್ರಕರಣಗಳು ಸಕ್ರಿಯವಾಗಿವೆ.
ವೀರಾಜಪೇಟೆಯ ಶಾಂತಿನಗರದ ಈ ಹಿಂದೆ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಿಂದ ಮತ್ತೆ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 67ವರ್ಷದ ಪುರುಷ, 57 ಹಾಗೂ 28 ವರ್ಷದ ಮಹಿಳೆಯರು,10 ಹಾಗೂ 7 ವರ್ಷದ ಇಬ್ಬರು ಬಾಲಕರು ಸೋಂಕಿಗೆ ಒಳಗಾಗಿದ್ದಾರೆ.
ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‍ನ 86 ವರ್ಷದ ಮಹಿಳೆ ಹಾಗೂ ಎಂ.ಎಂ.ಲೇಔಟ್‍ನ 38 ವರ್ಷದ ಪುರುಷನಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಈ ಎರಡೂ ಬಡಾವಣೆಗಳನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿ ಗೃಹದಲ್ಲಿದ್ದ 21 ವರ್ಷದ ಪುರುಷನಲ್ಲೂ ಸೋಮಕು ದೃಢಪಟ್ಟಿದ್ದು, ಈ ಹಿಂದೆ ಸೋಂಕು ದೃಢಪಟ್ಟ ಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ ಶನಿವಾರಸಂತೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದ 31 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಪ್ರವಾಸ ಇತಿಹಾಸವಿರುವ ಸೋಮವಾರಪೇಟೆ ತಾಲೂಕು ನೇರಳೆ ಗ್ರಾಮದ ಜ್ವರ ಲಕ್ಷಣವಿದ್ದ 26 ವರ್ಷದ ಪುರುಷನಲ್ಲೂ ಕೋವಿಡ್-19 ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನೇರಳೆ ಗ್ರಾಮದಲ್ಲೂ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಸೋಂಕಿತರ ಪ್ರಮಾಣ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ಕೊಡಗಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಈ ಪೈಕಿ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ, ಒಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ 122 ಪ್ರಕರಣಗಳು ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ಪ್ರದೇಶಗಳ ಸಂಖ್ಯೆಯೂ 54ಕ್ಕೇ ಏರಿಕೆಯಾಗಿದೆ. ಸೋಮವಾರಪೇಟೆ ತಾಲೂಕಿನ ಹುಲುಸೆ ಮತ್ತು ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮಗಳನ್ನು ನಿಯಂತ್ರಿತ ಪ್ರದೇಶದಿಂದ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.