ಕೊಡಗರಹಳ್ಳಿ ಮತ್ತು ಕಂಬಿಬಾಣೆಯಲ್ಲಿ ಕಾಡಾನೆಗಳ ಹಾವಳಿ : ಕೃಷಿ ನಾಶ

11/07/2020

ಸುಂಟಿಕೊಪ್ಪ,ಜು.11 : ಕೊಡಗರಹಳ್ಳಿ ಮತ್ತು ಕಂಬಿಬಾಣೆಗಳಲ್ಲಿ ಕಾಡಾನೆಗಳ ಹಿಂಡು ಆಹಾರಕ್ಕಾಗಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು ತೋಟಗಳಲ್ಲಿ ಬೆಳೆಸಲಾದ ಕಾಫಿ, ತೆಂಗು, ಬಾಳೆ, ಅಡಿಕೆ ಫಸಲು ಗದ್ದೆಗಳ ಪೈರನ್ನು ತಿಂದು ಧ್ವಂಸಗೊಳಿಸುತ್ತಿದೆ ಎಂದು ಕೃಷಿಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕೊಡಗರಹಳ್ಳಿ ಮತ್ತು ಕಂಬಿಬಾಣೆ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ನಿತ್ಯ ತೋಟಗಳಿಗೆ ಲಗ್ಗೆಯಿಡುತ್ತಿದ್ದು, ತೋಟದಲ್ಲಿ ಬೆಳೆಸಲಾದ ಕಾಫಿ ಗಿಡಗಳು ಇನ್ನಿತರರ ಫಸಲನ್ನು ಉಳಿಸಿಕೊಳ್ಳುವಲ್ಲಿ ಕೃಷಿಕರು ಭಯದಿಂದ ಜೀವನ ದೂಡುವಂತ್ತಾಗಿದೆ ಎಂದು ಈ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೊಡಗರ ಹಳ್ಳಿ ಪಂಚಾಯಿತಿಯ ಚೌಡಿಕಾಡು ತೋಟಕ್ಕೆ ಆನೆಗಳು ಧಾಳಿ ನಡೆಸಿ ಕಾಫಿ ಗಿಡಗಳನ್ನು ತುಳಿದು ಸಮಾರು 30 ಸಾವಿರ ನಷ್ಟ ಸಂಭವಿಸಿದೆ ಎಂದು ತೋಟದ ಮಾಲಿಕರು ಶುಭಾಸ್ ಪೈ ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಕಂಬಿಬಾಣೆ ಪೂಜಾ ತೋಟಕ್ಕೆ ಕಾಡಾನೆಗಳ ಹಿಂಡು ನುಗ್ಗಿ ಸುಮಾರು 60 ಸಾವಿರದಷ್ಟು ಕೃಷಿ ಪಸಲುಗಳನ್ನು ನಾಶ ಪಡಿಸಿದೆ ಎಂದು ತೋಟದ ಮಾಲಿಕರು ತಿಳಿಸಿದ್ದಾರೆ. ಮತ್ತು ಸಮೀಪದ ಗೋವಿಂದ ತೋಟಕ್ಕೆ ನುಗ್ಗಿದ ಆನೆಗಳು ಬಾಳೆಗಿಡ. ತೆಂಗಿನ ಗಿಡ.ಕಾಫಿ ಸಸಿಗಳನ್ನು ಫಸಲನ್ನು ಹಾಳು ದ್ವಂಸಗೊಳಿಸಿದೆ ಎಂದು ತೋಟದ ಮಾಲಿಕರು ಪತ್ರಿಕೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರೂ ಕಾಡಾನೆಗಳನ್ನು ಹಿಡಿಯುವ ಬಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ತೋಟದ ಮಾಲಿಕರು ಅರಣ್ಯ ಇಲಾಖೆಗೆ ದೂರು ನೀಡಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.