ಗ್ಯಾನೆಂದ್ರೊ ಹಾಕಿ ಇಂಡಿಯಾ ಅಧ್ಯಕ್ಷ

11/07/2020

ನವದೆಹಲಿ ಜು.11 : ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಂಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ.
ಅಹಮದ್ ಅವರು ಜುಲೈ 7ರಂದೇ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಹಾಕಿ ಇಂಡಿಯಾ ಆಡಳಿತ ಮಂಡಳಿ ಇಂದು ತುರ್ತು ಸಭೆ ಕರೆದು, ಸಭೆಯಲ್ಲಿ ಗ್ಯಾನೆಂದ್ರೊ ನಿಗೊಂಬಮ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಹಮದ್ ಅವರು ರಾಷ್ಟ್ರೀಯ ಕ್ರೀಡಾ ನೀತಿಯಲ್ಲಿರುವ ಅಧ್ಯಕ್ಷೀಯ ಅಧಿಕಾರವಧಿ ನಿಯಮವನ್ನು ಅವರು ಉಲ್ಲಂಘಿಸಿದ್ದರಿಂದ, ಸ್ಥಾನ ತೊರೆಯುವಂತೆ ಕೇಂದ್ರ ಕ್ರೀಡಾ ಸಚಿವಾಲಯ ಈಚೆಗೆ ಸೂಚಿಸಿತ್ತು.
`ಅಧ್ಯಕ್ಷ ಸ್ಥಾನಕ್ಕೆ ಅವರ ಆಯ್ಕೆಯು ನಿಯಮಬಾಹಿರವಾಗಿತ್ತು. ವಯೋಮಿತಿ ಮತ್ತು ಪದಾಧಿಕಾರಿಗಳ ಅಧಿಕಾರವಧಿಯ ನಿಯಮಗಳನ್ನು ಪಾಲಿಸಲಾಗಿರಲಿಲ್ಲ. ಆದ್ದರಿಂದ ಸರ್ಕಾರವು ಅವರಿಗೆ ಮುಂದುವರಿಯದಿರಲು ಸೂಚಿಸಿತ್ತು’ ಎಂದು ಹೇಳಲಾಗಿದೆ.