ಬಿಜೆಪಿ ಶಾಸಕರಿಗೆ ಇಚ್ಛಾಶಕ್ತಿ ಕೊರತೆ : ಡಿಸಿಸಿ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಆರೋಪ

11/07/2020

ಪೊನ್ನಂಪೇಟೆ, ಜು.11: ಕೊಡಗಿನಲ್ಲಿ ಸಾಂಕ್ರಾಮಿಕ ರೋಗಾಣು ಸೋಂಕು ‘ಕೋವಿಡ್-19’ ದಿನೇದಿನೇ ಏರಿಕೆಯಾಗುತ್ತಿದೆ. ಇದನ್ನು ಜಿಲ್ಲೆಯಲ್ಲಿ ನಿಯಂತ್ರಿಸುವಲ್ಲಿ ಸರಕಾರ ಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ)ಯ ಮಾಜಿ ಅಧ್ಯಕ್ಷರೂ ಆಗಿರುವ ಕೊಡಗು ಜಿ. ಪಂ.ಸದಸ್ಯರಾದ ಮುಕ್ಕಾಟೀರ ಶಿವು ಮಾದಪ್ಪ ಅವರು, ಕೊಡಗಿನಲ್ಲಿ ಸೋಂಕಿನ ಬೀತಿ ಹೆಚ್ಚಾಗುತ್ತಿದ್ದರೂ ಆಡಳಿತರೂಡ ಪಕ್ಷದ ಶಾಸಕರು ಇದೀಗ ಮೌನವಹಿಸಿದ್ದಾರೆ. ಕೋವಿಡ್-19 ನಿಯಂತ್ರಿಸುವಲ್ಲಿ ಅವರ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ. ಇದು ಸರ್ಕಾರದ ಮತ್ತೊಂದು ವೈಫಲ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ವಿಮರ್ಶಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕು ಪತ್ತೆ ಹಚ್ಚುವ ಕಾರ್ಯ ತ್ವರಿತವಾಗಿ ನಡೆಯುತ್ತಿಲ್ಲ. ತಪಾಸಣೆ ವೇಳೆ ವ್ಯಕ್ತಿಗಳಿಂದ ಮಾದರಿಗಳನ್ನು ಸಂಗ್ರಹಿಸಿದ 5ರಿಂದ 7 ದಿನಗಳ ನಂತರ ಫಲಿತಾಂಶ ಬರುತ್ತಿದೆ. ಜಿಲ್ಲೆಯಲ್ಲಿ ಇರುವ ಏಕೈಕ ಕೋವಿಡ್-19 ಪ್ರಯೋಗಾಲಯದ ಇಬ್ಬರು ಸಿಬ್ಬಂದಿಗಳಲ್ಲಿ ಇತ್ತೀಚೆಗೆ ಸೋಂಕು ಪತ್ತೆಯಾದ ಕಾರಣ ಮೂರು ದಿನ ಅಲ್ಲಿನ ಕೆಲಸಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಪ್ರಯೋಗಾಲಯದ ಯಂತ್ರಗಳಲ್ಲಿ ತಾಂತ್ರಿಕ ದೋಷವೂ ಎದುರಾಗುತ್ತಿದೆ. ಈ ರೀತಿಯಾದರೆ ಕೊಡಗಿನ ಪಾಡೇನು? ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಕಾರ್ಯಾಚರಣೆ ಮಾಡಬೇಕಾದ ಜಿಲ್ಲಾಡಳಿತ ಏನು ಮಾಡುತ್ತಿದೆ? ಹೆಚ್ಚುವರಿ ಸಿಬ್ಬಂದಿಗಳನ್ನು ಎಲ್ಲಾ ಹಂತಗಳಲ್ಲೂ ಸಜ್ಜುಗೊಳಿಸಬೇಕಾದ ಆರೋಗ್ಯ ಇಲಾಖೆಯ ಜವಾಬ್ದಾರಿ ಏನು? ಅಮಾಯಕ ಜನತೆ ತಮ್ಮ ಅಹವಾಲುಗಳನ್ನು ಯಾರೊಂದಿಗೆ ಹೇಳಿಕೊಳ್ಳಬೇಕು? ಈ ಎಲ್ಲಾ ವೈಫಲ್ಯಗಳಿಗೆ ಯಾರು ಹೊಣೆ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಹೊರಗಿನಿಂದ ಜಿಲ್ಲೆಗೆ ಕೊರೋನಾ ಸೋಂಕು ಪ್ರವೇಶಿಸದಂತೆ ತಡೆಯಲು ಕಳೆದ ಮಾರ್ಚ ತಿಂಗಳಲ್ಲೇ ಕೊಡಗು-ಕೇರಳದ ಎಲ್ಲಾ 3 ಗಡಿಗಳನ್ನು ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿ ಮಣ್ಣು ಹಾಕಿ ಬಂದ್ ಮಾಡಲಾಯಿತು. ಜಿಲ್ಲಾಡಳಿತ ತೆಗೆದುಕೊಂಡ ಇದೊಂದು ಸ್ವಾಗತಾರ್ಹ ನಿರ್ಧಾರವಾಗಿತ್ತು. ಇದರಿಂದ ಕೊಡಗು ಮತ್ತು ಕೇರಳದ ನಡುವಿನ ಎಲ್ಲಾ ವಹಿವಾಟು ಸೇರಿದಂತೆ ಜನ ಸಂಪರ್ಕವು ಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ ಕೊಡಗು- ಕೇರಳ ಗಡಿ ಬಂದ್ ಮಾಡಿಯೂ ಕೊಡಗಿನಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾದರೆ ಅಂತರಾಜ್ಯ ಗಡಿಗಳನ್ನು ಪೂರ್ಣವಾಗಿ ಮುಚ್ಚಿ ಆದ ಪ್ರಯೋಜನವೇನು ಎಂದು ಖಾರವಾಗಿ ಪ್ರಶ್ನಿಸಿದ ಶಿವು ಮಾದಪ್ಪ ಅವರು, ಕೊಡಗಿನಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಿವಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂಬ ಜನಾಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆ ಅಪಾಯದತ್ತ ಸಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ವ್ಯಾಪಕವಾಗಿ ಸೋಂಕು ಪತ್ತೆಯಾಗುತ್ತಿದೆ. ಆದರೂ ಜಿಲ್ಲೆಯ ಗಡಿಗಳಲ್ಲಿ ಇದುವರೆಗೂ ಯಾವುದೇ ನಿಯಂತ್ರಣ ಕ್ರಮಗಳನ್ನು ಜಿಲ್ಲಾಡಳಿತ ಏಕೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿದೆ ಎಂದು ಆಕ್ರೋಶದಿಂದ ನುಡಿದರು.

ಜಿಲ್ಲೆಯಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿರುವ ನಡುವೆ ಬೇರೆ ಜಿಲ್ಲೆಗಳಿಂದ ಸಾಕಷ್ಟು ಪ್ರವಾಸಿಗರು ಕೊಡಗಿಗೆ ಬರುತ್ತಿದ್ದಾರೆ. ಹಣದಾಸೆಗಾಗಿ ಜಿಲ್ಲೆಯ ಕೆಲವು ಹೋಂಸ್ಟೇಗಳು ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿದೆ ಎಂದು ಆರೋಪಿಸಿದ ಶಿವು ಮಾದಪ್ಪ ಅವರು, ಮಹಾಮಾರಿ ಕೊರೋನಾ ಭೀತಿಯಲ್ಲಿರುವ ಕೊಡಗು ಇದೀಗ ಪ್ರವಾಸಿಗರ ಮೋಜಿನ ಸ್ಥಳವಲ್ಲ. ಆದ್ದರಿಂದ ಸ್ಥಳೀಯ ಜನತೆ ಈ ಕುರಿತು ಜಾಗೃತರಾಗಿ ಆಯಾ ವ್ಯಾಪ್ತಿಯಲ್ಲಿರುವ ಹೋಂಸ್ಟೇಗಳ ಬಗ್ಗೆ ನಿಗಾವಹಿಸಬೇಕು. ಜಿಲ್ಲಾಡಳಿತದ ನಿರ್ಬಂಧವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುತ್ತಿರುವ ಹೋಂಸ್ಟೇಗಳನ್ನು ಪತ್ತೆ ಹಚ್ಚಿ ಸಂಬಂಧಿಸಿದವರಿಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಹೀಗಾದರೆ ಮಾತ್ರ ಕೊಡಗು ಜಿಲ್ಲೆಯನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19ಸೋಂಕನ್ನು ನಿಯಂತ್ರಿಸಿ ಜನರ ಜೀವ ರಕ್ಷಿಸಲು ಮುಂದೆ ಬಹುದೊಡ್ಡ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕಿದೆ. ಆದ್ದರಿಂದ ಸರಕಾರ ಮತ್ತು ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಪರಿಣಾಮಕಾರಿಯಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕಿದೆ. ಜಿಲ್ಲಾಧಿಕಾರಿಗಳು ಇನ್ನಷು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕಾಗಿದೆ. ದ.ಕೊಡಗಿನ ಕುಟ್ಟ, ನಾಗರಹೊಳೆ ಮೊದಲಾದ ಪ್ರದೇಶದಲ್ಲಿರುವ ವ್ಯಕ್ತಿಗಳಿಗೆ ಸೋಂಕು ಪತ್ತೆಯಾದರೆ 100 ಕಿ.ಮೀ. ದೂರದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಹೋಗುವ ಬದಲು ಆಯಾ ತಾಲೂಕು ಕೇಂದ್ರಗಳಲ್ಲಿ ಐಸೋಲೇಶನ್ ಘಟಕಗಳನ್ನು ಪ್ರಾರಂಭಿಸಬೇಕು. ಅದೇ ರೀತಿ ಕೋವಿಡ್-19 ಪ್ರಯೋಗಾಲಯಗಳನ್ನು ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಕೂಡಲೇ ಪ್ರಾರಂಭಿಸಿ ಒಂದೇ ದಿನದಲ್ಲಿ ಫಲಿತಾಂಶ ನೀಡಬೇಕು. ಇದಕ್ಕಾಗಿ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿ ಹೆಚ್ಚುವರಿ ಸೇವೆಗಾಗಿ ಅವರನ್ನು ಸಿದ್ಧಗೊಳಿಸಬೇಕು. ಐಸೋಲೇಶನ್ ಕೇಂದ್ರಗಳಿಗಾಗಿ ಸರಕಾರದ ಅಧೀನದಲ್ಲಿರುವ ಬಾಳುಗೋಡಿನ ಏಕಲವ್ಯ ವಸತಿ ಶಾಲೆಗಳಂತಹ ಕಟ್ಟಡಗಳನ್ನು ಬಳಸಿಕೊಳ್ಳಬೇಕು. ಮುಂದೆ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಏರಿಕೆ ಆಗುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿರುವ ಶಿವು ಮಾದಪ್ಪ ಅವರು, ಕೋವಿಡ್ ಪ್ರತಿರೋಧ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ಖರ್ಚುಗಳನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬಳಸಲು ಅವಕಾಶವಿರುವುದರಿಂದ ಕೋವಿಡ್ ನಿಯಂತ್ರಣಾ ಕಾರ್ಯಯೋಜನೆಗಳಿಗೆ ಈ ನಿಧಿಯಿಂದಲೇ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರಲ್ಲದೆ, ಪ್ರಕೃತಿ ವಿಕೋಪ ಪರಿಹಾರ ನಿಧಿಯ ಹಣ ಮಳೆಗಾಲದಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಲು ಮಾತ್ರ ಇರುವುದಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕವಾದ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂಬ ದೂರಿದೆ. ಜಿಲ್ಲೆಯ ವಿವಿಧೆಡೆ ಜಾರಿಗೊಳಿಸಲಾಗಿರುವ ನಿಯಂತ್ರಿತ ವಲಯದಲ್ಲಿ ವಾಸಿಸುವ ಜನತೆಗೆ ಅಗತ್ಯ ವಸ್ತುಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಈ ಕುರಿತ ಸಮಸ್ಯೆ ಪರಿಹರಿಸುವಲ್ಲಿ ಆಡಳಿತರೂಡ ಪಕ್ಷದ ಶಾಸಕರ ನಿಲುವೇನು? ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ಐಸೋಲೇಶನ್ ಕೇಂದ್ರಗಳನ್ನು ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸುವಂತೆ ಸರಕಾರದ ಮುಂದೆ ಬೇಡಿಕೆಗಳನಿಟ್ಟು ಮಹಾಮಾರಿ ಈ ಸೋಂಕನ್ನು ನಿಯಂತ್ರಿಸುವ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರು ವಿಶೇಷ ಮುತುವರ್ಜಿ ವಹಿಸಿ ತಮ್ಮ ಹೊಣೆಗಾರಿಕೆ ನಿಭಾಯಿಸಬೇಕಾಗಿತ್ತು. ಅವರ ಇಚ್ಛಾಶಕ್ತಿಯ ಕೊರತೆಯ ಪರಿಣಾಮ ಇದೀಗ ಜನತೆಯ ಮೇಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ಯಾರು ಜವಾಬ್ದಾರಿ ಎಂದು ಕೇಳಿರುವ ಶಿವು ಮಾದಪ್ಪ ಅವರು, ಕೂಡಲೇ ಕೊಡಗಿಗೆ ಸಂಪರ್ಕ ಕಲ್ಪಿಸುವ ಅಂತರ್ಜಿಲ್ಲಾ ಗಡಿ ಗೇಟ್ ಗಳಲ್ಲಿ ಸೂಕ್ತ ನಿರ್ಬಂಧ ಹೇರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಜಿಲ್ಲೆಯ ಜನತೆಯ ಸುರಕ್ಷೆ ಕಾಪಾಡುವುದು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಬೇಕು ಎಂದು ಜನತೆಯ ಪರವಾಗಿ ಒತ್ತಾಯಿಸುವುದಾಗಿ ಹೇಳಿದರು.