ಶನಿವಾರ, ಭಾನುವಾರ ಸಂಪೂರ್ಣ ಬಂದ್ : ಸಹಕರಿಸಲು ಚೇಂಬರ್ ಆಫ್ ಕಾಮರ್ಸ್ ಮನವಿ

11/07/2020

ಮಡಿಕೇರಿ ಜು.11 : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸೋಂಕು ವ್ಯಾಪಿಸದಂತೆ ತಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾಡಳಿತದ ಪ್ರಯತ್ನಗಳಿಗೆ ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರು ಸಹಕಾರ ನೀಡಬೇಕೆಂದು ಮನವಿ ಮಾಡಿದೆ.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಎಂ.ಬಿ.ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಚೇಂಬರ್ ನ ತುರ್ತುಸಭೆಯಲ್ಲಿ ಜು.18 ಮತ್ತು 19 ಹಾಗೂ ಜು.25 ಮತ್ತು 26 ರಂದು ಪೂರ್ಣ ಪ್ರಮಾಣದಲ್ಲಿ ಕೊಡಗು ಬಂದ್ ಮಾಡಲು ನಿರ್ಧರಿಸಲಾಯಿತು. ಬಂದ್ ನ ಬಗ್ಗೆ ನಿರ್ಧಾರ ಕೈಗೊಳ್ಳಲು ಜಿಲ್ಲಾ ಚೇಂಬರ್ ನ ಸ್ಥಾನೀಯ ಸಮಿತಿಗಳಿಗೆ ಅಧಿಕಾರ ನೀಡಲಾಯಿತು.
ಕೊರೋನಾ ರೋಗಾಣು 60 ಗಂಟೆಗಳ ಕಾಲ ಜೀವಿತವಾಗಿರುತ್ತದೆ ಎಂದು ಅನುಭವಿ ತಜ್ಞರು ದೃಢೀಕರಿಸಿರುವುದರಿಂದ ಶನಿವಾರ ಮತ್ತು ಭಾನುವಾರ ಎರಡೂ ದಿನ ಬಂದ್ ಮಾಡುವ ಅಗತ್ಯವಿದ್ದು, ಈ ಕ್ರಮದಿಂದ ಮಾತ್ರ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಬಹುದೆಂದು ಅಧ್ಯಕ್ಷ ಎಂ.ಬಿ.ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಅಭಿಪ್ರಾಯಪಟ್ಟರು.
ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತಷ್ಟು ಸಕ್ರಿಯವಾಗಿ ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಎಲ್ಲಾ ಸಾರ್ವಜನಿಕರು, ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರು ವೈದ್ಯರ ಸಲಹೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸು ಮತ್ತು ಸ್ಯಾನಿಟೈಸರ್ ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
::: ಗಿರೀಶ್ ಗೆ ಸನ್ಮಾನ :::
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಮಾಜಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ಅವರನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗಿರೀಶ್ ಅವರು ರಾಜ್ಯ ಎಸ್.ಕೆ.ಸಿ.ಸಿ.ಐ ನ ನಿರ್ದೇಶಕರೂ ಹಾಗೂ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಟ್ರಸ್ಟ್‍ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.