ವಾಡಿಕೆ ಮಳೆಯ ಕೊರತೆ : ಮೈದುಂಬಿಕೊಳ್ಳದ ಜಲಪಾತಗಳು

11/07/2020

ಮಡಿಕೇರಿ ಜು.11 : ಕಳೆದ ಎರಡು ವರ್ಷಗಳ ಮಹಾಮಳೆಯಿಂದ ಮಿಂದೆದ್ದಿದ್ದ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಅದೇಕೋ ಮುಂಗಾರು ಮುನಿಸಿಕೊಂಡಂತೆ ಕಾಣುತ್ತಿದೆ. ಜುಲೈ ತಿಂಗಳ ಮಳೆ ಎಂದರೆ ಅದು ಮಳೆಯೂರು ಕೊಡಗಿಗೆ ಶೋಭೆ ತರುವಂತ್ತಿತ್ತು. ಆದರೆ ಈ ಬಾರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಕಡೆ ಮಳೆಯ ಕೊರತೆ ಉಂಟಾಗಿದೆ.
ಜಿಲ್ಲಾಡಳಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿಯನ್ನು ಪ್ರಕಟಿಸುತ್ತಲೇ ಬಂದಿದೆಯಾದರೂ ಒಂದೆರಡು ದಿನ ಉತ್ತಮ ಮಳೆಯಾಗಿ ಉಳಿದ ದಿನಗಳಲ್ಲಿ ಮಳೆಯೇ ಮಾಯವಾಗಿದೆ. ಜುಲೈ ತಿಂಗಳಿನಲ್ಲಿ ಬಿಸಿಲು ಕಾಣುವುದೇ ಅಪರೂಪ, ಆದರೆ ಈ ಬಾರಿ ಸೋಮವಾರಪೇಟೆಯ ವಿವಿಧೆಡೆ ಬಿಸಿಲಿನ ವಾತಾವರಣವೇ ಹೆಚ್ಚಾಗಿದೆ. ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಜಲಪಾತಗಳು ಕೂಡ ಬರಡಾದಂತೆ ಕಂಡು ಬಂದಿದ್ದು, ಮಡಿಕೇರಿ- ಚೆಟ್ಟಳ್ಳಿ ಮಾರ್ಗದ ಅಭ್ಯಾಲ ಜಲಪಾತ ಮಳೆಯಿಲ್ಲದೆ ಸೊರಗಿದೆ. ಮಳೆಗಾಲದಲ್ಲಿ ನಿತ್ಯ ದುಮ್ಮಿಕ್ಕಿ ಹರಿದು ಹಾಲ್ನೊರೆಯಂತೆ ಆಕರ್ಷಿಸುತ್ತಿದ್ದ ಈ ಜಲಪಾತ ಇಂದು ದಾರಿಹೋಕರನ್ನು ನಿರಾಶೆಗೊಳಿಸುತ್ತಿದೆ.
ಹಾರಂಗಿ ಜಲಾಶಯ ಅವಧಿಗೂ ಮುನ್ನ ಭರ್ತಿಯಾಗಲಿದೆ ಎಂದು ಹೇಳಲಾಗಿತ್ತಾದರೂ ಮಳೆಯ ಕೊರತೆಯಿಂದ ಶೀಘ್ರ ಭರ್ತಿಯಾಗುವ ಸಾಧ್ಯತೆಗಳು ಕಡಿಮೆ ಇದೆ. ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಕಡೆ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದ್ದು, ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕೃಷಿಕರು ಕೃಷಿಗೆ ಪೂರಕವಾದ ಮಳೆಯ ನಿರೀಕ್ಷೆಯಲ್ಲಿದ್ದರೆ ಪ್ರಕೃತಿ ಮಾತೆ ವಾಡಿಕೆ ಮಳೆಗಾಗಿ ಎದುರು ನೋಡುತ್ತಿದೆ.