ಕೊಡಗಿನಲ್ಲಿ ಒಂದೇ ದಿನ 20 ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆ

11/07/2020

ಮಡಿಕೇರಿ ಜು.11 : ಕೊಡಗು ಜಿಲ್ಲೆಯಲ್ಲಿ ಶನಿವಾರ ಮತ್ತೆ 20 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಶನಿವಾರ ಮುಂಜಾನೆ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಸಂಜೆ ವೇಳೆಗೆ ಮತ್ತೆ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮತ್ತೊಂದೆಡೆ ಶನಿವಾರ 44 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಬಿಡುಗಡೆಯಾದವರ ಸಂಖ್ಯೆ 62ಕ್ಕೇರಿದೆ. ಒಟ್ಟು ಸೋಂಕಿತರ ಪೈಕಿ ಒಬ್ಬರು ಮೃತಪಟ್ಟಿದ್ದು, ಉಳಿದ 88 ಪ್ರಕರಣಗಳು ಸಕ್ರಿಯವಾಗಿವೆ.
ವೀರಾಜಪೇಟೆಯ ಶಾಂತಿನಗರದ ಈ ಹಿಂದೆ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಿಂದ ಮತ್ತೆ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 67ವರ್ಷದ ಪುರುಷ, 57 ಹಾಗೂ 28 ವರ್ಷದ ಮಹಿಳೆಯರು,10 ಹಾಗೂ 7 ವರ್ಷದ ಇಬ್ಬರು ಬಾಲಕರು ಸೋಂಕಿಗೆ ಒಳಗಾಗಿದ್ದಾರೆ.
ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‍ನ 86 ವರ್ಷದ ಮಹಿಳೆ ಹಾಗೂ ಎಂ.ಎಂ.ಲೇಔಟ್‍ನ 38 ವರ್ಷದ ಪುರುಷ ಮತ್ತು 34 ವರ್ಷದ ಮಹಿಳೆಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಅಲ್ಲಿನ ನೇತಾಜಿ ಲೇಔಟ್‍ನ 21 ವರ್ಷ ಹಾಗೂ 48 ವರ್ಷದ ಮಹಿಳೆಯರಲ್ಲೂ ಸೋಂಕು ದೃಢಪಟ್ಟಿದೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿ ಗೃಹದಲ್ಲಿದ್ದ 21 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದ್ದು, ಈ ಹಿಂದೆ ಸೋಂಕು ದೃಢಪಟ್ಟ ಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ರೆಸಾರ್ಟ್ ಉದ್ಯೋಗಿ, ಮಡಿಕೇರಿ ಭಗವತಿ ನಗರದ 31 ವರ್ಷದ ಪುರುಷ, ಪೊಲೀಸ್ ವಸತಿಗೃಹದ 38 ವರ್ಷದ ಪುರುಷನಲ್ಲಿ ಸೋಂಕು ಕಂಡು ಬಂದಿದೆ.
ಮತ್ತೊಂದೆಡೆ ಶನಿವಾರಸಂತೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದ 31 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಪ್ರವಾಸ ಇತಿಹಾಸವಿರುವ ಸೋಮವಾರಪೇಟೆ ತಾಲೂಕು ನೇರಳೆ ಗ್ರಾಮದ ಜ್ವರ ಲಕ್ಷಣವಿದ್ದ 26 ವರ್ಷದ ಪುರುಷನಲ್ಲೂ ಕೋವಿಡ್-19 ದೃಢಪಟ್ಟಿದೆ.
ಸೋಮವಾರಪೇಟೆ ತಾಲೂಕಿನ ಹಳ್ಳದಿಣ್ಣೆಯ 41 ವರ್ಷದ ಪುರುಷ, ಕೊಡ್ಲಿಪೇಟೆ ಬೆಸೂರಿನ 30 ವರ್ಷದ ಪುರುಷ ಬ್ಯಾಂಕ್ ಉದ್ಯೋಗಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಳಗುಂದದ ಈ ಹಿಂದೆ ಸೋಂಕಿತರ ಪ್ರಾಥಮಿಕ ಸಂಪರ್ಕದ 41 ವರ್ಷದ ಪುರುಷ, ಗುಡುಗಳಲೆಯ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 32 ವರ್ಷದ ಪುರುಷನಲ್ಲಿ ಸೋಂಕು ಕಂಡು ಬಂದಿದೆ.
ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದ ಜ್ವರ ಲಕ್ಷಣವಿದ್ದ 50 ವರ್ಷದ ಮಹಿಳೆಯಲ್ಲೂ ಕೋವಿಡ್-19 ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.