15 ದಿನ ಲಾಕ್‍ಡೌನ್ ಗೆ ಕೊಡಗು ರಕ್ಷಣಾ ವೇದಿಕೆ ಒತ್ತಾಯ

11/07/2020

ಮಡಿಕೇರಿ ಜು.11 : ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೊರೋನಾ ಸೋಂಕು ಮಿತಿ ಮೀರಿ ವ್ಯಾಪಿಸುತ್ತಿರುವುದರಿಂದ ಸ್ಥಳೀಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ತಕ್ಷಣ 15 ದಿನಗಳ ಕಟ್ಟುನಿಟ್ಟಿನ ಲಾಕ್‍ಡೌನ್ ಗೆ ಆದೇಶ ಹೊರಡಿಸಬೇಕು ಮತ್ತು ಗಡಿಭಾಗವನ್ನು ಕಡ್ಡಾಯವಾಗಿ ಬಂದ್ ಮಾಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು ಅತಿ ಹೆಚ್ಚು ಮಳೆಯಾಗುವ ಗುಡ್ಡಗಾಡು ಜಿಲ್ಲೆಯಾದ ಕೊಡಗಿನಲ್ಲಿ ಕೊರೋನಾ ಸೋಂಕು ಭಾರೀ ಸಂಖ್ಯೆಯಲ್ಲಿ ಸಾವು ನೋವು ಉಂಟು ಮಾಡುವ ಮುನ್ಸೂಚನೆಯನ್ನು ನೀಡಿದ್ದು, ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯನ್ನು 15 ದಿನಗಳ ಕಾಲ ಲಾಕ್‍ಡೌನ್ ಮಾಡಬೇಕೆನ್ನುವ ಅಭಿಪ್ರಾಯ ಜನವಲಯದಿಂದ ಕೇಳಿ ಬರುತ್ತಿದ್ದು, ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿ ಇತರರಿಂದ ಸೋಂಕು ಜಿಲ್ಲೆಯನ್ನು ವ್ಯಾಪಿಸದಂತೆ ತಡೆಯಬೇಕಾಗಿದೆ ಎಂದು ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ ಕೊರೋನಾ ಸೋಂಕಿನ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಕೈಚೆಲ್ಲಿ ಕುಳಿತಂತೆ ಕಂಡು ಬರುತ್ತಿದೆ. ಅಲ್ಲದೆ ರಾಜ್ಯ ಸರ್ಕಾರದ ಆತುರದ ನಿರ್ಧಾರಗಳಿಂದ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದಲೂ ಸೋಂಕು ವ್ಯಾಪಿಸಿದೆ. ಹೊರ ಜಿಲ್ಲೆ, ಹೊರ ರಾಜ್ಯ ಮತ್ತಿತರೆಡೆಗಳಿಂದ ಕೊಡಗನ್ನು ಪ್ರವೇಶಿಸಿದವರನ್ನು ಮತ್ತು ಪ್ರವಾಸಿಗರನ್ನು ಯಾವುದೇ ಆರೋಗ್ಯ ಪರೀಕ್ಷೆಗೆ ಒಳಪಡಿಸದೆ ನಿರ್ಲಕ್ಷ್ಯ ತೋರಿದ್ದೇ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವೆಂದು ಅವರು ಟೀಕಿಸಿದ್ದಾರೆ.
ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಯನ್ನು ಕಡ್ಡಾಯಗೊಳಿಸದೆ ಏಕಾಏಕಿ ಸಡಿಲಗೊಳಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಕೊರೋನಾ ವಿಚಾರದಲ್ಲಿ ಹಸಿರ ವಲಯದಲ್ಲಿದ್ದ ಕೊಡಗು ಇಂದು ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.
ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳದಿದ್ದಲ್ಲಿ ನೂರೈವತ್ತು ಮೀರಿರುವ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುವ ಸಾಧ್ಯತೆಗಳಿದೆ. ವೈದ್ಯಕೀಯ ಸೌಲಭ್ಯಗಳು ಕೂಡ ಸೀಮಿತವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದನ್ನು ನಿಭಾಯಿಸುವ ಶಕ್ತಿ ಕುಂದಿ ಹೋಗಬಹುದು. ಇದರ ನಡುವೆಯೇ ಧಾರಾಕಾರ ಮಳೆಯಾದರೆ ಅತಿವೃಷ್ಟಿಯಿಂದ ಸಂಪರ್ಕ ವ್ಯವಸ್ಥೆ ಕಡಿತಗೊಂಡು ಆರೋಗ್ಯ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳಬಹುದು ಎಂದು ಪವನ್ ಪೆಮ್ಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.