ಕೊರೋನಾ ಸಂಕಷ್ಟ ಎದುರಿಸಲು ಸರ್ಕಾರ ಸಿದ್ಧವಿದೆ : ನಳಿನ್ ಕುಮಾರ್ ಕಟೀಲ್ ಸಮರ್ಥನೆ

11/07/2020

ಮಡಿಕೇರಿ ಜು.11 : ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ವ್ಯಾಪಿಸುತ್ತಿರುವ ಕೊರೋನಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಳೆಗಾಲವನ್ನು ನಿರ್ವಹಿಸಲು ಕೂಡ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರಿನ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಎದುರಾಗಬಹುದಾದ ಸಂಕಷ್ಟಗಳ ನಿವಾರಣೆಗೆ ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತಕ್ಕೆ ಅನುದಾನವನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ಕೊರೊನಾ ನಿಯಂತ್ರಣಕ್ಕೂ ಹೆಚ್ಚಿನ ಒತ್ತು ನೀಡುವ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಜಗತ್ತಿನಲ್ಲೆ ಅತ್ಯಂತ ದೊಡ್ಡದಾದ 10 ಸಾವಿರ ಹಾಸಿಗೆಗಳ, ಸಕಲ ಸೌಲಭ್ಯಗಳನ್ನು ಹೊಂದಿದ ಆಸ್ಪತ್ರೆಯನ್ನು ಸಜ್ಜುಗೊಳಿಸುವ ಮೂಲಕ ಮಹಾಮಾರಿಯನ್ನು ಎದುರಿಸಲು ಸಜ್ಜಾಗಿದೆ. ಇದರೊಂದಿಗೆ ಪ್ರತಿವಾರ್ಡ್‍ಗಳಲ್ಲಿ ಒಂದೊಂದು ಸಮಿತಿಯನ್ನು ರಚಿಸಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಿರುವುದಲ್ಲದೆ, ರಾಜ್ಯ ವ್ಯಾಪಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಮತ್ತು ವೈದ್ಯರ ಸಹಕಾರವನ್ನು ಪಡೆದುಕೊಳ್ಳುವ ಮೂಲಕ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿ ಕಾರ್ಯ ನಿರ್ವಹಣೆ ಮಾಡಿದೆ. ಇಂತಹ ಪರಿಸ್ಥಿತಿಗಳ ನಡುವೆ ಒಂದಷ್ಟು ಕೊರತೆಗಳು ಸಹಜವೆಂದು ನಳಿನ್ ಕುಮಾರ್ ಕಟೀಲ್ ಸರ್ಕಾರದ ಕಾರ್ಯನಿರ್ವಹಣೆÉಯನ್ನು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಾಣಿಸಿಕೊಂಡ ಹಂತದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ‘ಲಾಕ್ ಡೌನ್’ ನಂತಹ ನಿರ್ಧಾರವನ್ನು ತಳೆಯುವ ಮೂಲಕ ಮಹಾಮಾರಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಇದರ ಪರಿಣಾಮ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಇದೀಗ ಮಾರಕ ವೈರಸ್ ಸೋಂಕಿನ ತಡೆ ಮತ್ತು ಚಿಕಿತ್ಸೆಗಾಗಿ ಅಗತ್ಯ ಲ್ಯಾಬ್, ಐಸಿಯು ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಆಶಾಕಾರ್ಯಕರ್ತೆಯರ ಸಹಕಾರದೊಂದಿಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಕೊರೊನಾ ಸೋಂಕು ಇತರೆಡೆಗಳಿಗಿಂತ ರಾಜ್ಯದಲ್ಲಿ ನಿಯಂತ್ರಣದಲ್ಲಿ ಇದೆ ಎಂದರು.
ಪ್ರಸ್ತುತ ಕೊರೊನಾ ಪಾಸಿಟಿವ್ ಪ್ರಕರಣಗಳು ಜಾಸ್ತಿ ಇದ್ದರೂ, ಇದರೊಂದಿಗೆ ಗುಣಮುಖಹೊಂದಿ ಆಸ್ಪತ್ರೆಯಿಂದ ಹೊರ ಬರುತ್ತಿರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
::: ಪಕ್ಷದಿಂದ ಸಾಮಾಜಿಕ ಆಂದೋಲನ :::
ಬಿಜೆಪಿಯು ರಾಜಕೀಯ ಪಕ್ಷವಾಗಿದ್ದುಕೊಂಡು ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವನ್ನು ಒದಗಿಸುವ ಸಾಮಾಜಿಕ ಆಂದೋಲನದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಆಹಾರದ ಕಿಟ್‍ಗಳನ್ನು ವಿತರಿಸುವ, ಕ್ವಾರಂಟೈನ್‍ನಲ್ಲಿರುವವರಿಗೆ ಅಗತ್ಯವಾದ ಔಷಧಿಗಳನ್ನು ವಿತರಿಸುವ ಕಾರ್ಯವನ್ನು ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಿರ್ವಹಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಪಕ್ಷವು ಇಲ್ಲಿವರೆಗೆ ರಾಜ್ಯದಾದ್ಯಂತ 1.50 ಕೋಟಿ ಜನರಿಗೆ ಆಹಾರ ಸಾಮಗ್ರಿಗಳನ್ನು, 50 ಲಕ್ಷ ಮನೆಗಳಿಗೆ ಅಗತ್ಯ ನೆರವನ್ನು, 1.80 ಲಕ್ಷ ಮಂದಿಗೆ ಅಗತ್ಯ ಔಷಧಿಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆಯೆಂದು ತಿಳಿಸಿದರು.
::: ಆತ್ಮನಿರ್ಭರ ಭಾರತ :::
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಕ ಹಂತದಲ್ಲಿ ನೀಡಿದ್ದ ಲಾಕ್ ಡೌನ್ ಕರೆಗೆ ರಾಷ್ಟ್ರದ ಜನತೆ ಗೌರವವನ್ನು ನೀಡಿ ನಡೆದುಕೊಂಡಿದ್ದಾರೆ. ಅದರಂತೆಯೇ ಪ್ರಧಾನಿಗಳು 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನನ್ನು ರಾಷ್ಟ್ರದ ಜನತೆಗೆ ಘೋಷಿಸುವ ಮೂಲಕ ಆತ್ಮ ನಿರ್ಭರ ಭಾರತದ ಪರಿಕಲ್ಪನೆಗೆ ಒತ್ತು ನೀಡಿ, ಸಮಾಜದ ಎಲ್ಲಾ ವರ್ಗಗಳಿಗೆ ಅಗತ್ಯ ನೆರವನ್ನು ಒದಗಿಸಿದ್ದಾರೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ವರ್ಗದವರ ನೆರವಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ ಸಿಂಹ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಉಪಸ್ಥಿತರಿದ್ದರು.