ಕೊಡಗಿನಲ್ಲಿ ಮಿತಿ ಮೀರುತ್ತಿದೆ ಸೋಂಕಿತರ ಸಂಖ್ಯೆ : ಸಂಪರ್ಕ ತಡೆಗೆ ಹೊಸ ಮಾರ್ಗಸೂಚಿ

12/07/2020

ಮಡಿಕೇರಿ ಜು.12 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮಿತಿ ಮೀರುತ್ತಿದ್ದು, ಹೊಸ ಸಂಪರ್ಕ ತಡೆ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ದೃಢಪಟ್ಟ ಪ್ರಕರಣಗಳಲ್ಲಿ ಅವರ ಪ್ರಯಾಣ ಹಿನ್ನೆಲೆಯನ್ನು ಪರಿಶೀಲಿಸಿದಾಗ ವಿದೇಶ, ಹೊರ ರಾಜ್ಯ, ಹೊರ ಜಿಲ್ಲೆಯ ಪ್ರಯಾಣ ಹಿನ್ನಲೆ ಇರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿಯಾದಲ್ಲಿ ಮತ್ತಷ್ಟು ಮಂದಿ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಸಂಪರ್ಕ ತಡೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅದರಂತೆ ವಿದೇಶದಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ತಡೆ ಮತ್ತು ನಂತರದ 7 ದಿನಗಳು ಗೃಹ ಸಂಪರ್ಕ ತಡೆಯಲ್ಲಿರಬೇಕು. ಹೊರ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿರಬೇಕು. ಅಲ್ಲದೆ ಹೊರ ಜಿಲ್ಲೆಗಳಿಂದ ಆಗಮಿಸಿದವರು 7 ದಿನಗಳ ಕಾಲ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿ ಇರಬೇಕು ಎಂದು ಅವರು ಸೂಚಿಸಿದ್ದಾರೆ.
ಈ ರೀತಿಯಾಗಿ ಸಂಪರ್ಕ ತಡೆಯಲ್ಲಿ ಇರುವವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಸ್ಥಳೀಯ ಕಾರ್ಯ ವ್ಯಾಪ್ತಿಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಈಗಾಗಲೇ ಜನಪ್ರತಿನಿಧಿಗಳನ್ನು ಒಳಗೊಂಡಂತೆ ರಚಿತವಾಗಿರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ, ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಮೇಲಿನ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ನಿಗಾವಹಿಸಬೇಕು ಎಂದು ಅವರು ಹೇಳಿದ್ದಾರೆ.
ತುರ್ತು, ಅನಿವಾರ್ಯ, ವೈದ್ಯಕೀಯ ಹಿನ್ನಲೆಯಲ್ಲಿ ಆಗಮಿಸಿದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ, ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಪರಿಶೀಲಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳಬೇಕು. ನಿಯಮದ ಉಲ್ಲಂಘನೆಯಾಗುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ, ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.