ಕೊರೋನಾ ಸೋಂಕು : ಕೊಡಗಿನಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

12/07/2020

ಮಡಿಕೇರಿ ಜು.12 : ಮಡಿಕೇರಿಯ ಕೋವಿಡ್ ಆಸತ್ರೆಯಲ್ಲಿ ಭಾನುವಾರ ಸಂಜೆ 77 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕೋವಿಡ್ ಆಸ್ಪತ್ರೆಗೆ ಜು.9ರಂದು ಪುನರ್ ದಾಖಲಾಗಿದ್ದ ಮಡಿಕೇರಿ ತಾಲೂಕಿನ ಚೇರಂಬಾಣೆಯ ನಿವಾಸಿ 77 ವರ್ಷದ ಪುರುಷರೊಬ್ಬರು ಭಾನುವಾರ ಸಂಜೆ 4.15ರ ಸುಮಾರಿಗೆ ತೀವ್ರ ಕಿಡ್ನಿ ಸಮಸ್ಯೆಯಿಂದ ಮೃತರಾಗಿದ್ದು, ಇವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 169ರಷ್ಟಿದ್ದು, 62 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, 104 ಸಕ್ರಿಯ ಪ್ರಕರಣಗಳಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ಸರಕಾರದ ನಿಯಮಾನುಸಾರ ನೆರವೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.