ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆ

12/07/2020

ಮಡಿಕೇರಿ ಜು.12 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇಂದು ಮೂರು ಮಂದಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮತ್ತೆ 18 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದ್ದು, ಕುಶಾಲನಗರದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿನಿಂದ ಸಾವಿಗೀಡಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ದಂಡಿನಪೇಟೆಯ 49 ವರ್ಷ, 20 ವರ್ಷ, 24ವರ್ಷದ ಪುರುಷರು ಹಾಗೂ 22ವರ್ಷ, 25 ವರ್ಷ, 40 ವರ್ಷ, 45ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಹಿಂತಿರುಗಿದ್ದ ಜ್ವರ ಲಕ್ಷಣವಿದ್ದ ಕೊಡ್ಲಿಪೇಟೆ ಊರುಗುತ್ತಿಯ 63 ವರ್ಷದ ಮಹಿಳೆ, ಜ್ವರ ಲಕ್ಷಣವಿದ್ದ ಹೆಬ್ಬಾಲೆ ಅಂಬೇಡ್ಕರ್ ಬ್ಲಾಕ್‍ನ 45 ವರ್ಷದ ಮಹಿಳೆ, ಸುಂಟಿಕೊಪ್ಪದ 11 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಡಿಕೇರಿ ಪುಟಾಣಿ ನಗರದ ಚಾಮರಾಜ ಬಂಗ್ಲೆ ಸಮೀಪದ 53 ವರ್ಷದ ಅಂಬ್ಯುಲೆನ್ಸ್ ಚಾಲಕ, ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯ 63 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ನಿವಾಸಿ, ಬೆಂಗಳೂರಿನಿಂದ ಹಿಂದಿರುಗಿರುವ ಮತ್ತು ಜ್ವರ ಲಕ್ಷಣವಿದ್ದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಕುಶಾಲನಗರ ಶಿವರಾಮ ಕಾರಂತ ಬಡಾವಣೆಯ 55 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತರೊಬ್ಬಲ್ಲೂ ಸೋಂಕು ದೃಢಪಟ್ಟಿದೆ.
ಮತ್ತೊಂದೆಡೆ ವೀರಾಜಪೇಟೆ ತಾಲೂಕಿನ ತೋರ ಗ್ರಾಮದ ಜ್ವರ ಲಕ್ಷಣವಿದ್ದ 29 ವರ್ಷದ ಪುರುಷರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ.
ಗೋಣಿಕೊಪ್ಪದ ವಿಜಯನಗರ ಬಡಾವಣೆಯ ನಿವಾಸಿ 39 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಹಾಗೂ ಮಡಿಕೇರಿಯ ಮೆಡಿಕಲ್ ಕಾಲೇಜು ಬಳಿಯ ಪ್ಯಾರಿಸ್ ಬಾಣೆ ನಿವಾಸಿ 34 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಲ್ಲೂ ಸೋಂಕು ದೃಢಪಟ್ಟಿದೆ.
::: ನಿಯಂತ್ರಿತ ಪ್ರದೇಶಗಳು :::
ಜಿಲ್ಲೆಯಲ್ಲಿ ಹೊಸದಾಗಿ ಸೋಮವಾರಪೇಟೆಯ ತಲ್ತರೆಶೆಟ್ಟಳ್ಳಿ, ಕುಶಾಲನಗರದ ಶಿವರಾಮ ಕಾರಂತ ಬಡಾವಣೆ, ವೀರಾಜಪೇಟೆಯ ತೋರ, ಗೋಣಿಕೊಪ್ಪದ ವಿಜಯನಗರ ಬಡಾವಣೆ, ಮಡಿಕೇರಿಯ ಪ್ಯಾರಿಸ್ ಬಾಣೆ, ಕೊಡ್ಲಿಪೇಟೆಯ ಊರುಗುತ್ತಿ, ಹೆಬ್ಬಾಲೆಯ ಅಂಬೇಡ್ಕರ್ ಬ್ಲಾಕ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ, ಮಡಿಕೇರಿ ಪುಟಾಣಿ ನಗರದ ಚಾಮರಾಜ ಬಂಗ್ಲೆ, ಕುಶಾಲನಗರದ ಅಯ್ಯಪ್ಪ ದೇವಸ್ಥಾನ ರಸ್ತೆ ಸೇರಿದಂತೆ 10 ಹೊಸ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ಈ ಹಿಂದೆ ತೆರೆಯಲಾಗಿದ್ದ ಮೂರ್ನಾಡುವಿನ ಸುಭಾಷ್ ನಗರ, ಕುಶಾಲನಗದ ಅಣ್ಣೇಗೌಡ ಬಡಾವಣೆ, ವೀರಾಜಪೇಟೆಯ ಮೀನುಪೇಟೆ ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದ್ದು, ಈ ಪೈಕಿ 68 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೂವರು ಸಾವಿಗೀಡಾಗಿದ್ದು, 98 ಪ್ರಕರಣಗಳು ಸಕ್ರಿಯವಾಗಿವೆ. ನಿಯಂತ್ರಿತ ಪ್ರದೇಶಗಳ ಸಂಖ್ಯೆ 68ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ವೀರಾಜಪೇಟೆ ತಾಲೂಕಿನ ನಿವಾಸಿ ಗೋಣಿಕೊಪ್ಪದ 86 ವರ್ಷದ ವೃದ್ಧೆಯೊಬ್ಬರು ಜು.6ರಂದು ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜು.7ರಂದು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತಾದರೂ (ಜು.11)ಶನಿವಾರ ರಾತ್ರಿ ಅವರು ಅಸುನೀಗಿದ್ದಾರೆ.