ಸೋಂಕಿತರ ಸಂಖ್ಯೆ ಡಬಲ್ ಆಗಲಿದೆ

13/07/2020

ಬೆಂಗಳೂರು ಜು.13 : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮುಂದಿನ 15 ರಿಂದ 30 ದಿನದಲ್ಲಿ ಸೋಂಕಿತರ ಸಂಖ್ಯೆ ಡಬಲ್ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರು ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಆರೋಗ್ಯ ಸಚಿವರು, ಮಂಗಳವಾರ ರಾತ್ರಿ 8 ಗಂಟೆಯಿಂದ 7 ದಿನಗಳ ಕಾಲ ಬೆಂಗಳೂರಿನಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಎಲ್ಲರೂ ನಿಯಮಗಳನ್ನು ಪಾಲಿಸಿ. ರಾಜ್ಯದಲ್ಲಿ ಈಗ ದಿನವೊದಕ್ಕೆ 2000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದಿನ 15 ರಿಂದ 30 ದಿನಗಳಲ್ಲಿ ಇದು ದ್ವಿಗುಣವಾಗಬಹುದು. ಮುಂದಿನ 2 ತಿಂಗಳು ನಮಗೆ ಅತಿ ದೊಡ್ಡ ಸವಾಲಾಗಲಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಆದರೂ ಇದರಿಂದ ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ಭಯ ಪಡುವ ಅಗತ್ಯ ಇಲ್ಲ. ಸರ್ಕಾರ ಸೋಂಕು ತಡೆಯುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಭರವಸೆ ನೀಡಿದ್ದಾರೆ.