ಅಕ್ರಮ ಬೀಟೆ ನಾಟ ಸಾಗಾಟ : ಹಾರಂಗಿ ರಸ್ತೆಯಲ್ಲಿ ಕಾರು ಸಹಿತ ಮಾಲು ವಶ

13/07/2020

ಮಡಿಕೇರಿ ಜು.13 : ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರು ಸಹಿತ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ. ಹಾರಂಗಿ ರಸ್ತೆಯ ಉಮಾಮಹೇಶ್ವರಿ ದೇವಾಲಯದ ಬಳಿ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.

ಪ್ರಮುಖ ಆರೋಪಿ ಹಾನಗಲ್ಲು ಶೆಟ್ಟಳ್ಳಿಯ ನಿತ್ಯಾನಂದ ತನ್ನ ಸಹಚರನೊಂದಿಗೆ ನಾಪತ್ತೆಯಾಗಿದ್ದಾನೆ. ಕಾರಿನ ಡಿಕ್ಕಿಯಲ್ಲಿ 1ಲಕ್ಷ ರೂ. ಮೌಲ್ಯದ 7 ನಾಟಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಯಿತು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ನೆಹರು ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಲಯದ ಆರ್.ಎಫ್.ಒ. ಕೆ.ಕೊಟ್ರೇಶ್, ಡಿ.ಆರ್.ಎಫ್.ಒ. ಎಂ.ಕೆ.ಮನು, ರಕ್ಷಕರುಗಳಾದ ರಾಜಣ್ಣ, ಭೀಮಣ್ಣ, ಈರಣ್ಣ, ಪ್ರಸಾದ್ ಸಿಬ್ಬಂದಿಗಳಾದ ರಾಜಪ್ಪ, ತಮ್ಮಯ್ಯ, ಪಾಪು ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.