ಅಂಬೇಡ್ಕರ್ ನಿವಾಸಕ್ಕೆ ಹಾನಿ : ಸೂಕ್ತ ಕ್ರಮಕ್ಕೆ ಪಿಂಟೋ ಒತ್ತಾಯ

13/07/2020

ಮಡಿಕೇರಿ ಜು.13 : ಮಹಾರಾಷ್ಟ್ರದ ಮುಂಬೈನ ದಾದರ್‍ನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಾಸವಿದ್ದ ರಾಜಗೃಹವನ್ನು ಕೆಲವು ಕಿಡಿಗೇಡಿಗಳು ಧ್ವಂಸ ಮಾಡಿರುವುದು ಖಂಡನೀಯವೆಂದು ತಿಳಿಸಿರುವ ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಕರ್ಣಂಗೇರಿ ಗ್ರಾಮದ ಜಾನ್ಸನ್ ಪಿಂಟೋ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶೋಷಿತರ ಹಾಗೂ ದುರ್ಬಲರ ಏಳಿಗೆಗಾಗಿ ಶ್ರಮಿಸಿದ ಮಹಾನಾಯಕನ ಆದರ್ಶಗಳನ್ನು ಪಾಲಿಸದೆ ಅವಮಾನಿಸುವ ಪ್ರಕರಣಗಳು ಪುನರಾವರ್ತನೆಯಾಗುತ್ತಿರುವುದು ವಿಷಾದಕರವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಅವರ ನಿವಾಸಕ್ಕೆ ಹಾನಿ ಉಂಟು ಮಾಡಿ ಅಪಮಾನಿಸಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಾನ್ಸನ್ ಪಿಂಟೋ, ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.