ತಾಯಿ ಮೃತಪಟ್ಟಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಹಾಜರಾದ ಶಿಕ್ಷಕಿ

13/07/2020

ಮಡಿಕೇರಿ ಜು. 13 : ತಾಯಿ ಮೃತಪಟ್ಟಿದ್ದರೂ ಸಹ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಹಾಜರಾಗುವ ಮೂಲಕ ಶಿಕ್ಷಕಿಯೊಬ್ಬರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬೆಟ್ಟಿಗೇರಿಯ ಉದಯ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಕವಿತಾ, ತಮ್ಮ ತಾಯಿ ಸಾವಿನ ಸಂದರ್ಭದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಶಿಕ್ಷಕಿಯ ತಾಯಿ ವಯೋಸಹಜ ಕಾಯಿಲೆಯಿಂದ ಮುಂಜಾನೆ ಸಾವನ್ನಪ್ಪಿದ್ದಾರೆ. ಆದರೆ ಮೌಲ್ಯಮಾಪನದ ಜವಾಬ್ದಾರಿ ಹೊತ್ತಿರುವ ಶಿಕ್ಷಕಿ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ನಡೆಯುತ್ತಿರುವ ಮೌಲ್ಯಮಾಪನಕ್ಕೆ ಹಾಜರಾಗಿದ್ದಾರೆ.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರೀಕ್ಷೆ ಕೂಡ ತೀರಾ ತಡವಾಗಿ ಮುಗಿದಿದೆ. ಆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಹಾಗಾಗಿ ಮೌಲ್ಯಮಾಪನದಲ್ಲಿ ಭಾಗಹವಿಸಿದ್ದು, ಇಂದಿನ ಕರ್ತವ್ಯ ಮುಗಿಸಿ ಬಳಿಕ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಶಿಕ್ಷಣಾಧಿಕಾರಿ ಮಚ್ಚಾಡೋ ಅವರು ಮಾತನಾಡಿ ಒಟ್ಟು ನಾಲ್ಕು ಕೊಠಡಿಗಳ 10 ಸಾವಿರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತೀ ಕೊಠಡಿಯಲ್ಲಿ 18 ಶಿಕ್ಷಕರು ಕುಳಿತು ಮೌಲ್ಯಮಾಪನ ಮಾಡುತ್ತಿದ್ದಾರೆ. ತಾಯಿ ಮೃತಪಟ್ಟಿದ್ದರೂ ಮೌಲ್ಯ ಮಾಪನಕ್ಕೆ ಹಾಜರಾಗಿರುವ ಶಿಕ್ಷಕಿಯ ಕರ್ತವ್ಯ ನಿಷ್ಠೆಯನ್ನು ಮೆಚ್ಚಬೇಕು ಎಂದಿದ್ದಾರೆ.
ಶಿಕ್ಷಕಿಯ ಕಾರ್ಯಕ್ಕೆ ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.