ದ್ರವ ಮಾದರಿ ನೀಡಿದವರಿಗೆ ಕಡ್ಡಾಯ ಗೃಹ ಸಂಪರ್ಕ ತಡೆ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ

13/07/2020

ಮಡಿಕೇರಿ ಜು.13 : ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ಕೋವಿಡ್-19 ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಯಾರೇ ವ್ಯಕ್ತಿಯ ಗಂಟಲ ದ್ರವ ಮಾದರಿಯನ್ನು ಸೋಂಕು ಪರೀಕ್ಷೆಗಾಗಿ ಪಡೆದಿದ್ದಲ್ಲಿ, ಅಂತಹ ವ್ಯಕ್ತಿಗಳ ಕೈಗೆ ಮೊಹರು ಹಚ್ಚಿ, ಪರೀಕ್ಷಾಲಯದ ವರದಿ ಬರುವವರೆಗೆ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿ ಇರಲು ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಈ ಸುತ್ತೋಲೆಯನ್ನು ಉಲ್ಲಂಘಿಸಿ ಗೃಹ ಸಂಪರ್ಕ ತಡೆಯಲ್ಲಿ ಇರದೆ ಹೊರಬರುವುದು, ಸಾರ್ವಜನಿಕವಾಗಿ ತಿರುಗಾಡುತ್ತಿರುವುದು, ಕೆಲಸದ ಮೇಲೆ ತೆರಳುವುದು ಇತ್ಯಾದಿಗಳು ಕಂಡುಬಂದಲ್ಲಿ ಅಂತವರ ವಿರುದ್ದ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.