ಕೋವಿಡ್ ಭಯ : ಸೋಮವಾರಪೇಟೆಯಲ್ಲಿ ಕಟ್ಟುನಿಟ್ಟಿನ ಕ್ರಮ

13/07/2020

ಸೋಮವಾರಪೇಟೆ ಜು.13 : ಕೋವಿಡ್-19 ವೈರಸ್ ಪಟ್ಟಣದ ಸುತ್ತಮುತ್ತ ಹರಡುತ್ತಿರುವದರಿಂದ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಸೋಮವಾರ ಸಂತೆಯನ್ನು ರದ್ದುಗೊಳಿಸಿ ತಹಸೀಲ್ದಾರ್ ಆದೇಶ ಹೊರಡಿಸಿದ್ದರು. ಪ.ಪಂ ವತಿಯಿಂದ ಮಾರುಕಟ್ಟೆಯ ಪ್ರವೇಶ ದ್ವಾರವನ್ನು ಬಂದ್ ಮಾಡಿದ್ದರಿಂದ, ವರ್ತಕರು ರಸ್ತೆ ಬದಿಯಲ್ಲೇ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಿದರು. ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದರೂ ಎಲ್ಲಿಯೂ ಸಾಮಾಜಿಕ ಅಂತರ ಕಂಡುಬರಲಿಲ್ಲ.
ಸೋಂಕಿತ ಯುವತಿ ವಾಸವಿದ್ದ ಕಕ್ಕೆಹೊಳೆ ಸಮೀಪದ ಪಿ.ಜಿ.ಯನ್ನು ಸೀಲ್‍ಡೌನ್ ಮಾಡಲಾಗಿದೆ. ಇದರೊಂದಿಗೆ ಕಕ್ಕೆಹೊಳೆಯಿಂದ ಜಿ.ಪಂ. ಅಭಿಯಂತರರ ಕಚೇರಿವರೆಗಿನ ರಸ್ತೆಯನ್ನು ಬಂದ್ ಮಾಡಲಾಗಿದೆ. ಕಾರೆಕೊಪ್ಪದಲ್ಲೂ ಕಂಟೈನ್‍ಮೆಂಟ್ ವಲಯ ಘೋಷಿಸಲಾಗಿದೆ.
ಇದರೊಂದಿಗೆ ಪಟ್ಟಣದ ಬ್ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರ್ವರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ಬ್ಯಾಂಕ್‍ನ್ನು ಸೀಲ್‍ಡೌನ್ ಮಾಡಲಾಗಿದ್ದು, ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ. ಮುಂದಿನ 7 ದಿನಗಳ ಕಾಲ ಬ್ಯಾಂಕ್‍ನ ಎಲ್ಲಾ ಸಿಬ್ಬಂದಿಗಳಿಗೂ ಹೋಂ ಕ್ವಾರೆಂಟೈನ್ ವಿಧಿಸಲಾಗಿದೆ. ಸಾರ್ವಜನಿಕರು ಪಟ್ಟಣದಲ್ಲಿ ಓಡಾಡುವ ಸಂದರ್ಭ ಅಗತ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕೆಂದು ತಾಲೂಕು ತಹಸೀಲ್ದಾರ್ ಗೋವಿಂದರಾಜು ಮನವಿ ಮಾಡಿದ್ದಾರೆ.