ಕೊರೋನಾ ಅವ್ಯವಹಾರ ಆರೋಪ : ಮಡಿಕೇರಿಯಲ್ಲಿ ಎಸ್‍ಡಿಪಿಐ ಪ್ರತಿಭಟನೆ

14/07/2020

ಮಡಿಕೇರಿ ಜು.14 : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೊರೋನಾ ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರ ಈ ಪರಿಸ್ಥಿತಿಯ ದುರ್ಲಾಭ ಪಡೆದು ಮಾಸ್ಕ್ ಮತ್ತು ಕೋವಿಡ್ ಟೆಸ್ಟ್ ಕಿಟ್ ವ್ಯವಹಾರದಲ್ಲಿ ಭಾರೀ ದಂಧೆಯಲ್ಲಿ ತೊಡಗಿದೆ. ಸೋಂಕಿತರ ದಿನದ ಖರ್ಚು, ಥರ್ಮಲ್ ಸ್ಕ್ಯಾನರ್, ಆಮ್ಲಜನಕ ಸಿಲಿಂಡರ್, ಗ್ಲೌಸ್, ಪಿಪಿಇ ಕಿಟ್, ವೆಂಟೆಲೇಟರ್ ಸಲಕರಣೆಗಳ ಖರೀದಿಗೆ ದುಪ್ಪಟ್ಟು ಲೆಕ್ಕ ತೋರಿಸಿ ರಾಜ್ಯದ ಜನತೆಯ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿದರು.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜನರ ಸಾವಿನ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡುತ್ತಿವೆಯೇ ಹೊರತು ಜನಹಿತವನ್ನು ಕಾಯುತ್ತಿಲ್ಲವೆಂದು ಅಮೀನ್ ಮೊಹಿಸಿನ್ ಟೀಕಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬಕ್ಕರ್, ಕಾರ್ಯದರ್ಶಿ ಅಬ್ದುಲ್ ಅಡ್ಕರ್, ತುಫೆಲ್, ಅಫ್ಸರ್ ಕೊಡ್ಲಿಪೇಟೆ, ಪ್ರಮುಖರಾದ ಕೆ.ಜಿ.ಪೀಟರ್, ಮೈಕಲ್ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.