ದ್ವಿತೀಯ ಪಿಯುಸಿ ಫಲಿತಾಂಶ : ಕೊಡಗು ಜಿಲ್ಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೆಷ್ಟು ? ಇಲ್ಲಿದೆ ವಿವರ…

14/07/2020

ಮಡಿಕೇರಿ ಜು.14 : 2020 ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಕೊಡಗು ಜಿಲ್ಲೆ 3 ನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಲಿಂಗ ಶೆಟ್ಟಿ ಅವರು ತಿಳಿಸಿದ್ದಾರೆ.
ಮಂಗಳವಾರ ರಾಜ್ಯಾದ್ಯಂತ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಈ ಬಾರಿ ಹೊಸದಾಗಿ (ಫ್ರೆಷರ್ಸ್) 4,997 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,074 ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಶೇ.81.53 ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿಯೇ ಕೊಡಗು ಜಿಲ್ಲೆ 3 ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಕಲಾ ವಿಭಾಗದಲ್ಲಿ 1,194 ವಿದ್ಯಾರ್ಥಿಗಳು ಹೊಸದಾಗಿ (ಫ್ರೆಶರ್ಸ್) ಪರೀಕ್ಷೆ ಬರೆದಿದ್ದರು. ಈ ಪೈಕಿ 737 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 61.73 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 2,691 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,302 ವಿದ್ಯಾರ್ಥಿಗಳು ಉತ್ತೀರ್ಣವಾಗುಚ ಮೂಲಕ ಶೇ. 85.54 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 1,112 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 1,035 ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ 93.08 ಫಲಿತಾಂಶ ಬಂದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು.
ಕೋವಿಡ್-19 ಕಾರಣದಿಂದಾಗಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯು ಜೂನ್ 18 ರಂದು ನಡೆದಿತ್ತು. ಇದೀಗ ಅಂತಿಮ ಪರೀಕ್ಷೆ ಮುಗಿದ 1 ತಿಂಗಳ ಒಳಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೇ ಮೊದಲನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗ ಶೆಟ್ಟಿ ಅವರು ತಿಳಿಸಿದ್ದಾರೆ.