ಪರಿಶಿಷ್ಟರ ಸೌಲಭ್ಯ ವಿಶೇಷಚೇತನರಿಗೂ ಲಭ್ಯ

ನವದೆಹಲಿ ಜು.15 : ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಯಾವುದೇ ವಿಶೇಷಚೇತನರು ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಿಕ್ಕುವ ಎಲ್ಲಾ ಅರ್ಹ ರಿಯಾಯಿತಿಗಳನ್ನು ತಾವೂ ಪಡೆದುಕೊಳ್ಳಬಹುದು ಎಂದು ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು ಈ ತೀರ್ಪು ನೀಡಿದ್ದು ದೆಹಲಿ ಹೈಕೋರ್ಟ್‍ನ 2012 ರ ತೀರ್ಪನ್ನು ಎತ್ತಿಹಿಡಿದಿದೆ
“ಅನ್ಮೋಲ್ ಭಂಡಾರಿ ಅವರಂತೆ ದೈಹಿಕ ನ್ಯೂನತೆ ಹೊಂದಿರುವ ವಿಶೇಷಚೇತನರೂ ಕೂಡ ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ಹೈಕೋರ್ಟ್ ಸರಿಯಾಗಿ ಅಭಿಪ್ರಾಯಪಟ್ಟಿದೆ ಮತ್ತು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡಲಾಗುವ ಎಲ್ಲಾ ಅರ್ಹ ರಿಯಾಯಿತಿಗಳಿಗೆ ಅವರೂ ಅರ್ಹರಾಗಿರುತ್ತಾರೆ” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಮತ್ತು ವಕೀಲ ರಾಜನ್ ಮಣಿ ಅವರು ಪ್ರತಿನಿಧಿಸುವ ವಿಶೇಷ ಚೇತನ ವ್ಯಕ್ತಿ ಪಂಜಾಬ್ ಮೂಲದ ಆರ್ಯನ್ ರಾಜ್ ಚಂಡೀಘರ್ ಸರ್ಕಾರಿ ಕಾಲೇಜ್ ಆಫ್ ಆಟ್ರ್ಸ್ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.
