ದ್ವಿತೀಯ ಪಿಯುಸಿ ಫಲಿತಾಂಶ : ಕೊಡಗಿನ ಕಾಲೇಜುಗಳ ಶೇಕಡವಾರು ಸಾಧನೆ

15/07/2020

ಮಡಿಕೇರಿ ಜು.15 : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ಈ ಬಾರಿ ಶೇ.81.53 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಗಳಿಸಿದೆ. ಕಳೆದ ವರ್ಷವೂ ಶೇ.83.31 ಫಲಿತಾಂಶ ಪಡೆಯುವ ಮೂಲಕ ಕೊಡಗು ಜಿಲ್ಲೆ ತೃತೀಯ ಸ್ಥಾನ ಪಡೆದಿತ್ತು.
ಜಿಲ್ಲೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ. ಈ ಬಾರಿ 4997 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ 4074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 1194 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 734 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.61.73 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದ 2069 ವಿದ್ಯಾರ್ಥಿಗಳ ಪೈಕಿ 2302 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು 85.54 ಫಲಿತಾಂಶ ಲಭ್ಯವಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 1112 ವಿದ್ಯಾರ್ಥಿಗಳ ಪೈಕಿ 1035 ವಿದ್ಯಾರ್ಥಿಗಳು ಉತ್ತೀರ್ಣವಾಗಿ ಶೇ.93.08 ಫಲಿತಾಂಶ ಲಭಿಸಿದೆ. ಸಂಪಾಜೆಯ ಸರಕಾರಿ ಪದವಿ ಕಾಲೇಜು ಹಾಗೂ ವಿರಾಜಪೇಟೆ ತಾಲೂಕಿನ ಸಾಯಿ ಶಂಕರ ಪಿಯು ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ.100ರಷ್ಟು ಸಾಧನೆ ಮಾಡಿವೆ. ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪದ ಲಯನ್ಸ್ ಪಿಯು. ಕಾಲೇಜು ಶೇ.100 ಸಾಧನೆ ಮಾಡಿರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದ್ದು, ಮತ್ತಷ್ಟು ಕಾಲೇಜುಗಳು ಈ ಪಟ್ಟಿಯಲ್ಲಿ ಸೇರುವ ಎಲ್ಲಾ ಸಾಧ್ಯತೆಗಳಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳು ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿರುವ ಎಲ್ಲಾ 65 ಪಿಯು ಕಾಲೇಜುಗಳಿಗೆ ಬೆಂಗಳೂರಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮುಖ್ಯ ಕಚೇರಿಯಿಂದಲೇ ಆನ್ ಲೈನ್ ಮೂಲಕ ಫಲಿತಾಂಶ ನೀಡಲಾಗಿರುವ ಹಿನ್ನಲೆಯಲ್ಲಿ ಮಡಿಕೇರಿಯಲ್ಲಿರುವ ಡಿಡಿಪಿಐ ಕಚೇರಿಗೆ ಇನ್ನಷ್ಟೇ ಹೆಚ್ಚಿನ ಫಲಿತಾಂಶ ಪಡೆದ ಕಾಲೇಜು ಮತ್ತು ಉನ್ನತ ದರ್ಜೆಯಲ್ಲಿ ಪಾಸಾಗಿರುವ ವಿದ್ಯಾರ್ಥಿಗಳ ಮಾಹಿತಿ ದೊರೆಯಬೇಕಿದೆ ಎಂದು ಡಿಡಿಪಿಐ ಶಿವಲಿಂಗ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಈ ಬಾರಿ ಕೊಡಗು ಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದ್ದು, ಇದಕ್ಕೆ ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಉತ್ತೇಜನ, ಶಿಕ್ಷಣ ಇಲಾಖೆಯ ಕ್ರಮ ಮತ್ತು ಜಿಲ್ಲಾಡಳಿತದ ಪ್ರೋತ್ಸಾಹವೇ ಕಾರಣ ಎಂದು ಡಿಡಿಪಿಐ ಶಿವಲಿಂಗ ಶೆಟ್ಟಿ ಹೇಳಿದರು. ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪೂರಕ ಪರೀಕ್ಷೆಗಳು ನಡೆಯಲಿದೆ. ವಿವಿಧ ಕಾರಣಗಳಿಂದ ಅನುತ್ತೀರ್ಣವಾಗಿರುವ ವಿದ್ಯಾರ್ಥಿಗಳು ದೃತಿಗೆಡದೇ ಪೂರಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವಂತೆ ಕೊಡಗು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಶಿವಲಿಂಗ ಶೆಟ್ಟಿ ಸಲಹೆ ನೀಡಿದ್ದಾರೆ.