ಶಿವ, ಪಾರ್ವತಿಗೆ ಪ್ರತ್ಯೇಕ ದೇವಸ್ಥಾನವಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಾರಿಂಜ ಕ್ಷೇತ್ರ

15/07/2020

ಕಾರಿಂಜ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದಲ್ಲಿದೆ. ಮಂಗಳೂರಿನಿಂದ 35 ಕಿ.ಮೀ. ಹಾಗೂ ಬಂಟ್ವಾಳದಿಂದ 14 ಕಿ.ಮೀ. ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ 10 ಕಿ.ಮೀ. ದೂರದಲ್ಲಿ ಸಿಗುವ ‘ವಗ್ಗ’ ಎಂಬಲ್ಲಿ ಕಾರಿಂಜ ಕ್ರಾಸ್ ಸಿಗುವುದು. ಬಲಕ್ಕೆ ಕಾರಿಂಜ ದ್ವಾರವು ಸಿಗುತ್ತದೆ. (ಬೆಂಗಳೂರಿಂದ ಬರುವವರು—>ಧರ್ಮಸ್ಥಳ—>ಉಜಿರೆ–>ಬೆಳ್ತಂಗಡಿ–>ಗುರುವಾಯನಕೆರೆ–>ಅಲ್ಲಿಂದ ಬಿಸಿರೋಡಿಗೆ ಹೋಗುವ ಮುನ್ನ ವಗ್ಗ ಸಿಗುವುದು.) ಎಡಕ್ಕೆ ಸ್ವಲ್ಪ ದೂರದಲ್ಲಿದೆ ಕಾರಿಂಜ ಪ್ರವೇಶದ್ವಾರ. ಇಲ್ಲಿಂದ 4 ಕಿ.ಮೀ. ಕೊಡ್ಯಮಲೆ ರಕ್ಷಿತಾರಣ್ಯದ ನಡುವಿನ ಡಾಂಬರು ರಸ್ತೆಯಲ್ಲಿ ಸಾಗಿದರೆ ಕಾರಿಂಜ ಬೆಟ್ಟವು ಸಿಗುವುದು.

ಕಾರಿಂಜ ಕ್ಷೇತ್ರದ ವಿಶೇಷತೆ :

  • ಕಾರಿಂಜ ಬೆಟ್ಟವು ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿದೆ. ಬಹಳ ಸುಂದರ ಸ್ಥಳ ಕಾರಿಂಜೇಶ್ವರ ದೇವಸ್ಥಾನ. ಬೆಟ್ಟವು ಬೃಹತ್ ಬಂಡೆಗಳಿಂದ ಮಾಡಲ್ಪಟ್ಟಿದು ಕಪಿಗಳಿಗೆ ಆಶ್ರಯವಾಗಿದೆ. ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುತ್ತದೆ. ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.
  • ಗುಡ್ಡದ ಕೆಳಗಿನಿಂದ ಮೇಲಿನ ಶಿವ ದೇವಸ್ಥಾನ ತನಕ ಸುಮಾರು 500ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ದರ್ಶನ ಮಾಡುವುದು ದೈವಭಕ್ತರಿಗೆ ಹಾಗೂ ಏಕದಿನ ಪಿಕ್ನಿಕ್ ಇಟ್ಟುಕೊಂಡವರಿಗೆ ಸೂಕ್ತ ಆಯ್ಕೆ. ಮೆಟ್ಟಲುಗಳಲ್ಲದೇ ಇತ್ತೀಚೆಗೆ ಕಾರಿಂಜ ಬೆಟ್ಟದ ಅರ್ಧದವರೆಗೆ, ಅಂದರೆ ಪಾರ್ವತಿ ದೇವಸ್ಥಾನ ತನಕ ಉತ್ತಮ ಡಾಂಬರು ರಸ್ತೆ ಕೂಡಾ ನಿರ್ಮಾಣವಾಗಿದೆ.

ಪೌರಾಣಿಕ ಹಿನ್ನೆಲೆ :
ಧಾರ್ಮಿಕವಾಗಿ ನಾಲ್ಕು ಯುಗಗಳಲ್ಲಿ ವಿವಿಧ ಹೆಸರುಗಳಿಂದ ಅಸ್ತಿತ್ವದಲ್ಲಿದ್ದು ಭೂ ಕೈಲಾಸ ಎಂಬ ಪ್ರತೀತಿಯನ್ನು ಹೊಂದಿದೆ. ಈ ಕ್ಷೇತ್ರವನ್ನು ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮಶೈಲವೆಂದು ಕರೆಯುತ್ತಿದ್ದರೆಂಬ ಐತಿಹ್ಯವಿದೆ. ಇಡೀ ಬೆಟ್ಟ ಪ್ರದೇಶ ಸುಮಾರು25 ಎಕರೆ ವ್ಯಾಪಿಸಿದೆ. ಇಡೀ ಕ್ಷೇತ್ರವನ್ನು ಕೊಡ್ಯಮಲೆಯ ದಟ್ಟ ಅರಣ್ಯ ಆವರಿಸಿಕೊಂಡಿದೆ.

ಕ್ಷೇತ್ರಕ್ಕೆ ಹೋಗುವ ಮಾರ್ಗ :
ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ ವಿಶಾಲ ’ಗದಾತೀರ್ಥ’ ಕಾಣಸಿಗುತ್ತದೆ. ಶುದ್ಧ ನೀರಿನ ಕೊಳವು ಸುಮಾರು 237 ಮೀ. ಉದ್ದ 55 ಮೀ. ಅಗಲವಿದೆ. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರು ಮಾಡಬಹುದು. ಇದು ದೊಡ್ಡಗಾತ್ರದ ಮೀನುಗಳಿಗೆ ಆಶ್ರಯವನ್ನು ಕೊಟ್ಟಿದೆ. ಕೆರೆಯಪಕ್ಕದಲ್ಲಿ ವಿಶಾಲವಾದ ಅಶ್ವತ್ತವೃಕ್ಷ; ಅಲ್ಲೇ ಬಲಕ್ಕೆ ಹುಲ್ಲುಹಾಸಿದ ಹರ ಮತ್ತು ಕಾಡು ಮುಚ್ಚಿಹೋದ ಪುರಾತನ ಗುಹೆಯೊಂದಿದೆ.
ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ (ಇನ್ನೊಂದು ಬದಿಯಲ್ಲಿ ಡಾಂಬರು ರಸ್ತೆ ಕೂಡಾ ಇದೆ.) ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿರುವ ಗದಾತೀರ್ಥ, ಪಾರ್ವತಿ ಕ್ಷೇತ್ರದ ಸನಿಹ ಏಕಶಿಲಾ ಗಣಪತಿ ಕ್ಷೇತ್ರದ ಎದುರಿಗಿ ರುವ ಉಗ್ರಾಣಿ ಗುಹೆಗಳು, ಉಕ್ಕುಡದ ಬಾಗಿಲು, ಉಂಗುಷ್ಟ ಮತ್ತು ಮೊಣಕಾಲು ತೀರ್ಥ, ಮಹಾಭಾರತದ ಅರ್ಜುನ ಹಂದಿಗೆ ಬಾಣಬಿಟ್ಟು ಹೋದ ಲಂಬರೇಖೆ ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳು. ನಡುವೆ ವಿನಾಯಕ ಗುಡಿಯನ್ನೂ ಹಾಗೂ ಸಣ್ಣಪುಟ್ಟ ತೀರ್ಥಗಳನ್ನು ಕಾಣಬಹುದು. ನಡು ನಡುವೆ, ಕಾಡಿನಿಂದ ಬರುವ ವಾನರ ಸೇನೆಯೂ ಸ್ವಾಗತಿಸುತ್ತದೆ.