ದ್ವಿತೀಯ ಪಿಯುಸಿ ಫಲಿತಾಂಶ : ಕೊಡಗು ಜಿಲ್ಲೆಯ ಟಾಪರ್ಸ್

15/07/2020

ಮಡಿಕೇರಿ ಜು.15 : 2020 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಪೂರ್ವ ಎಚ್.ಜಿ 600 ಅಂಕಗಳಿಗೆ 590 ಅಂಕ ಗಳಿಸುವುದರೊಂದಿಗೆ ಶೇ.98.33 ಫಲಿತಾಂಶದೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗ ಶೆಟ್ಟಿ ಅವರು ತಿಳಿಸಿದ್ದಾರೆ.
ವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪಲು ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ರಂಜನ ಎ.ಯು ಅವರು 589 ಅಂಕಗಳನ್ನು ಪಡೆಯುವ ಮೂಲಕ ಶೇ.98.17 ಫಲಿತಾಂಶದೊಂದಿಗೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ನಗರದ ಸಂತ ಜೋಸೆಫರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ ಕೆ.ಎಸ್ ಅವರು 564 ಅಂಕ ಪಡೆದು ಶೇ.94 ಫಲಿತಾಂಶದೊಂದಿಗೆ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಇನ್ನುಳಿದಂತೆ ವಾಣಿಜ್ಯ ವಿಭಾಗದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಚೈತ್ರ ಬಿ.ಎನ್ ಅವರು 585 ಅಂಕ ಪಡೆದು ಶೇ.97.50 ಫಲಿತಾಂಶದೊಂದಿಗೆ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ದೇವಿಕ ಎ.ಎಂ ಮತ್ತು ಗೋಣಿಕೊಪ್ಪಲಿನ ಕಾವೇರಿ ಪಿಯು ಕಾಲೇಜಿನ ಲಿಪಿಕ ಬಿ.ಎಂ ಅವರು ಸಮವಾಗಿ 584 ಅಂಕ ಗಳಿಸಿ ಶೇ.97.33 ಫಲಿತಾಂಶ ಪಡೆದು ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲಿನ ವಿದ್ಯಾನಿಕೇತನ ಪಿಯು ಕಾಲೇಜಿನ ಮೃಣಾಲಿನಿ ತಾಮನಕರ್ 587 ಅಂಕ ಗಳಿಸಿ ಶೇ.97.83 ಫಲಿತಾಂಶದೊಂದಿಗೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ತೃತೀಯ ಸ್ಥಾನವನ್ನು ಇದೇ ಕಾಲೇಜಿನ ಯುಕ್ತ ಕಾವೇರಪ್ಪ ಕೆ. ಮತ್ತು ಮಡಿಕೇರಿಯ ಸಂತ ಮೈಕಲರ ಪಿಯು ಕಾಲೇಜಿನ ಫಾತಿಮಾ ತಸ್ಲೀಮಾ ಪಿ.ಆರ್ ಅವರು ಸಮವಾಗಿ 582 ಅಂಕ ಗಳಿಸಿ ಶೇ.97.17 ಫಲಿತಾಂಶದೊಂದಿಗೆ ಹಂಚಿಕೊಂಡಿದ್ದಾರೆ.
ಕಲಾ ವಿಭಾಗಕ್ಕೆ ಸಂಬಂಧಿಸಿದಂತೆ ಮದೆನಾಡುವಿನ ಮದೆ ಮಹೇಶ್ವರ ಪಿಯು ಕಾಲೇಜಿನ ಧನ್ಯಶ್ರೀ ಎಚ್.ಜಿ ಅವರು 562 ಅಂಕ ಪಡೆದು ಶೇ.93.67 ಫಲಿತಾಂಶದೊಂದಿಗೆ ಕಲಾ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಂತ ಜೋಸೆಫರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಂಕಿತಾ ಎಚ್.ಪಿ ಮತ್ತು ಸಂಪಾಜೆ ಪಿಯು ಕಾಲೇಜಿನ ಗೀತಾ ಎಚ್.ಸಿ ಅವರು ಸಮವಾಗಿ 558 ಅಂಕ ಪಡೆದು ಶೇ.93 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕಣ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗ ಶೆಟ್ಟಿ ಅವರು ತಿಳಿಸಿದ್ದಾರೆ. ಅಲ್ಲದೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.