ಮತ್ತೆ ಆರು ಮಂದಿಯಲ್ಲಿ ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆ

15/07/2020

ಮಡಿಕೇರಿ ಜು. 15 : ಕೊಡಗು ಜಿಲ್ಲೆ ಹೊಸದಾಗಿ ಮತ್ತೆ 6 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ನೆಲ್ಲಿಹುದಿಕೇರಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 7 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಅಂತರ್ ಜಿಲ್ಲಾ ಪ್ರಯಾಣದ ಹಿನ್ನೆಲೆ ಇರುವ ವಿರಾಜಪೇಟೆ ತಾಲ್ಲೂಕಿನ ನಿರ್ಮಲಗಿರಿ, ಹೆಗ್ಗಳ ಗ್ರಾಮದ ನಿವಾಸಿಯಾದ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಪೆರುಂಬಾಡಿಯ ನಿವಾಸಿಯಾದ 43 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಬೆಂಗಳೂರು ಪ್ರಯಾಣ ಮಾಡಿರುವ ಹಿನ್ನೆಲೆ ಇದೆ. ಪ್ರಸ್ತುತ ಮಡಿಕೇರಿ ನಗರದ ಕಾನ್ವೆಂಟ್ ರಸ್ತೆಯಲ್ಲಿ ವಾಸವಿರುವ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 45 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿ ನಗರದ ಮುನೀಶ್ವರ ದೇವಸ್ಥಾನದ ಹಿಂಭಾಗದ ಸಿಬ್ಬಂದಿ ವಸತಿ ಗೃಹದಲ್ಲಿ ನಿವಾಸಿಯಾದ ಆರೋಗ್ಯ ಕಾರ್ಯಕರ್ತರಾಗಿರುವ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಬಲಮುರಿ ದೇವಸ್ಥಾನದ ಬಳಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 37 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 225ಕ್ಕೇರಿದ್ದು, ಈ ಪೈಕಿ 87 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮೂರು ಮಂದಿ ಸಾವಿಗೀಡಾಗಿದ್ದಾರೆ. 135 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 4 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 100ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಹೊಸ ನಿಯಂತ್ರಿತ ಪ್ರದೇಶ : ನೀರ್ಮಂಗಲ, ಹೆಗ್ಗಳ ಗ್ರಾಮ, ವಿರಾಜಪೇಟೆ ತಾಲ್ಲೂಕು, ಪೆರುಂಬಾಡಿ, ಆರ್ಜಿ ಗ್ರಾಮ, ವಿರಾಜಪೇಟೆ ತಾಲ್ಲೂಕು. ಕಾನ್ವೆಂಟ್ ರಸ್ತೆ, ಮಡಿಕೇರಿ ನಗರ