ನಿಯಂತ್ರಿತ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ತಾ.ಪಂ.ಇಒ ಲಕ್ಷ್ಮಿ ಎಚ್ಚರಿಕೆ

15/07/2020

ಮಡಿಕೇರಿ ಜು.15 : ತಾಲ್ಲೂಕಿನ ಬೇಂಗೂರು ಪಂಚಾಯಿತಿ ವ್ಯಾಪ್ತಿಯ ಚೇರಂಬಾಣೆ ಗ್ರಾಮದಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಸೀಲ್‍ಡೌನ್ ನಿಯಮ ಉಲ್ಲಂಘನೆ ಮಾಡಿದ್ದು, ಅಂಗಡಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ತಾ.ಪಂ.ಇಒ ಲಕ್ಷ್ಮಿ ಅವರು ತಿಳಿಸಿದ್ದಾರೆ.
ನಿಯಂತ್ರಿತ ವಲಯದ ಘಟನಾ ನಿಯಂತ್ರಕರಿಗೆ ಈ ಕುರಿತು ಪರಿಶೀಲಿಸಲು ಪತ್ರ ಬರೆದಿದ್ದರು. ಘಟನಾ ನಿಯಂತ್ರಕರು ಪರಿಶೀಲಿಸಿ ಕೂಡಲೇ ಅಂಗಡಿಯನ್ನು 14 ದಿನಗಳ ಕಾಲ ಮುಚ್ಚುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಸೂಚಿಸಿ ಅಂಗಡಿಯನ್ನು ಸೀಲ್ ಮಾಡಲಾಗಿದೆ ಎಂದು ತಾ.ಪಂ.ಇಒ ಪಿ.ಲಕ್ಷ್ಮಿ ಅವರು ತಿಳಿಸಿದ್ದಾರೆ.
ನಿಯಮ ಬಾಹಿರವಾಗಿ ವ್ಯಾಪಾರ ನಡೆಸಿ ಪದಾರ್ಥಗಳನ್ನು ಪೂರೈಸಿರುವ ಬಗ್ಗೆ ಬಂದ ಸಾರ್ವಜನಿಕ ದೂರಿನ ಆಧಾರದ ಮೇಲೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅವರು ಸ್ಥಳ ಪರಿವೀಕ್ಷಣೆ ನಡೆಸಿ ಪರಿಶೀಲಿಸಿ ವರದಿ ನೀಡಿದ್ದರು ಎಂದು ತಾ.ಪಂ.ಇಒ ಪಿ.ಲಕ್ಷ್ಮಿ ಅವರು ಹೇಳಿದ್ದಾರೆ.
ಅಲ್ಲದೆ ಅಂಗಡಿಯ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಈ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ ಕೆಲವರಿಗೆ ನಿಯಂತ್ರಿತ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದಕ್ಕಾಗಿ ನಿಯಾಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದು, ಇವರು ಕೂಡ ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿರುವಂತೆ ಕೈಗೆ ಸೀಲ್ ಹಾಕಲಾಗಿದೆ ಎಂದು ಪಿ.ಲಕ್ಷ್ಮಿ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಅವರ ಆದೇಶದಂತೆ ರಚನೆಯಾದ ಕಂಟೈನ್‍ಮೆಂಟ್ ವಲಯದಲ್ಲಿ ನಿಯಮ ಬಾಹಿರವಾಗಿ ವ್ಯಾಪಾರ ನಡೆಸಿದ ಬಗ್ಗೆ ಬಂದ ಸಾರ್ವಜನಿಕ ದೂರನ್ನು ಪರಿಶೀಲಿಸಿದಾಗ ಸತ್ಯವೆಂದು ಕಂಡುಬಂದಿದ್ದು, ಈ ಕುರಿತು ಕ್ರಮಕ್ಕಾಗಿ ಘಟಣಾ ನಿಯಂತ್ರಕರಿಗೆ ತಿಳಿಸಿದ ಮೇರೆಗೆ ಪ್ರದತ್ತ ಅಧಿಕಾರ ಚಲಾಯಿಸಿ ಅಂಗಡಿಯನ್ನು ಸೀಲ್ ಮಾಡಲಾಗಿದ್ದು, ತಾತ್ಕಾಲಿಕವಾಗಿ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ತಾ.ಪಂ.ಇಒ ಅವರು ತಿಳಿಸಿದ್ದಾರೆ.
ಕಂಟೈನ್ಮೆಂಟ್ ವಲಯಗಳಿಗೆ ಈಗಾಗಲೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿರುವುದರಿಂದ ಈ ರೀತಿ ಚಟುವಟಿಕೆಗಳಿಂದ ಸೋಂಕು ಸಾಂಕ್ರಮಿಕವಾಗಿ ಹಬ್ಬುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಗ್ರಾಮ ಹಾಗೂ ಸಾರ್ವಜನಿಕರ ಒಳಿತಿಗೆ ಸಹಕರಿಸಬೇಕು ಎಂದು ತಾ.ಪಂ.ಇಒ ಲಕ್ಷ್ಮೀ ಅವರು ಕೋರಿದ್ದಾರೆ.