ಕೋವಿಡ್ -19 ಪರೀಕ್ಷಾ ವರದಿ ವಿಳಂಬ: ಜನಪ್ರತಿನಿಧಿಗಳ ವಿಶೇಷ ಸಭೆ ಕರೆಯಲು ಜಿ. ಪಂ. ಸದಸ್ಯ ಬಿ.ಎನ್. ಪ್ರತ್ಯು ಒತ್ತಾಯ

15/07/2020

ಪೊನ್ನಂಪೇಟೆ, ಜು.15: ಜನತೆಯ ಬದುಕನ್ನೇ ತಲ್ಲಣಗೊಳಿಸಿರುವ ಸಾಂಕ್ರಾಮಿಕ ಸೋಂಕು ಕೋವಿಡ್-19ರ ನಿಯಂತ್ರಣ ಕಾರ್ಯಾಚರಣೆಯಲ್ಲಿರುವ ಆಶಾ ಕಾರ್ಯಕರ್ತರ ಆರೋಗ್ಯ ಕಾಪಾಡುವತ್ತ ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕು. ಕೋವಿಡ್-19ರ ಪ್ರತಿರೋಧ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಎಲ್ಲ ‘ಕೊರೋನಾ ಯೋಧ’ರ ಸುರಕ್ಷತೆಗೆ ಸರಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿರುವ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರತ್ಯು, ಇದಕ್ಕಾಗಿ ಜಿಲ್ಲಾಧಿಕಾರಿಗಳು ಕೂಡಲೇ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ವಿಶೇಷ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಜನರಲ್ಲಿ ಕೋವಿಡ್ ಕುರಿತ ಭಯ ವ್ಯಾಪಕವಾಗತೊಡಗಿದೆ. ಜನತೆಗೆ ತಮ್ಮ ಜೀವ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಜನತೆಗೆ ಆತ್ಮಸ್ಥೈರ್ಯ ತುಂಬಬೇಕಾದ ಜಿಲ್ಲಾಡಳಿತ ಜನರ ನಿರೀಕ್ಷೆಯಂತೆ ಸ್ಪಂದಿಸುತ್ತಿಲ್ಲ ಎಂಬ ಜನಾಭಿಪ್ರಾಯ ಜಿಲ್ಲೆಯಲ್ಲಿ ಹೆಚ್ಚಾಗತೊಡಗಿದೆ. ಕೋವಿಡ್-19 ಸೋಂಕು ಪತ್ತೆಹಚ್ಚಲು ವ್ಯಕ್ತಿಗಳ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗುತಿದ್ದು, ಅದರ ಫಲಿತಾಂಶ ಬರಲು 7ರಿಂದ 8ದಿನಗಳವರೆಗೆ ಕಾಯಬೇಕಾದ ದಯನೀಯ ಸ್ಥಿತಿಯನ್ನು ಜನ ಎದುರಿಸುತ್ತಿದ್ದಾರೆ. ಈ ವೇಳೆಗಾಗಲೇ ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳಿಗೆ ಸೋಂಕು ಇದ್ದರೂ ಪರೀಕ್ಷೆಯ ಫಲಿತಾಂಶ ಬರುವುದರೊಳಗೆ ಗುಣಮುಖರಾಗಿರುತ್ತಾರೆ. ಕೋವಿಡ್ ಪರೀಕ್ಷಾ ವರದಿ ವಿಳಂಬವಾಗುತ್ತಿರುವುದಕ್ಕೆ ಸಂಬಂಧಿಸಿದವರ ನಿರ್ಲಕ್ಷವೇ ಕಾರಣ. ಪರೀಕ್ಷಾ ವರದಿಯ ಫಲಿತಾಂಶವನ್ನು ಒಂದೇ ದಿನದಲ್ಲಿ ನೀಡಲಾಗುವುದು ಎಂಬ ಸರಕಾರದ ಇತ್ತೀಚಿನ ಭರವಸೆ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಬಿ.ಎನ್. ಪ್ರತ್ಯು ಅವರು ದೂರಿದ್ದಾರೆ.

ಕೋವಿಡ್ ಪ್ರತಿರೋಧ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಮತ್ತು ದಾದಿಯರಿಗೆ ಯಾವುದೇ ಆರೋಗ್ಯ ಭದ್ರತೆ ಇಲ್ಲದಂತಾಗಿದೆ. ಅವರಿಗೆ ನೀಡಲಾಗಿರುವ ಮಾಸ್ಕ್ ಗಳು ತೀರಾ ಕಳಪೆ ಮಟ್ಟದ ಸರ್ಜಿಕಲ್ ಮಾಸ್ಕ್ ಗಳಾಗಿದ್ದು, ಅದು 1 ಗಂಟೆಯ ಕೆಲಸಕ್ಕೂ ಉಪಯೋಗವಾಗುತ್ತಿಲ್ಲ. ಈ ಕಾರಣದಿಂದಲೇ ಜಿಲ್ಲೆಯ ಕೆಲವು ಆಶಾ ಕಾರ್ಯಕರ್ತರಿಗೆ ಸೋಂಕು ಬಾಧಿಸಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಗಮನಹರಿಸುವಲ್ಲಿಯೂ ಸರಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಬಿ.ಎನ್. ಪ್ರತ್ಯು ಅವರು, ಪ್ರತಿರೋಧ ಕಾರ್ಯಾಚರಣೆಯಲ್ಲಿರುವ ‘ಕೋವಿಡ್ ಯೋಧ’ರಿಗೆ ಸರಕಾರ ಸೂಕ್ತ ಆರೋಗ್ಯ ರಕ್ಷಣಾ ವ್ಯವಸ್ಥೆ ಕಲ್ಪಿಸದಿದ್ದರೆ ಅವರು ಸೇವೆ ಸಲ್ಲಿಸುವುದಾದರೂ ಹೇಗೆ? ಅವರ ಸೇವೆ ಸ್ಥಗಿತಗೊಂಡರೆ ಪ್ರತಿರೋಧ ಕೆಲಸದ ಮೂಲಕ ಸೋಂಕನ್ನು ನಿಯಂತ್ರಿಸುವುದು ಹೇಗೆ? ಈ ಎಲ್ಲಾ ನಿರ್ಲಕ್ಷ್ಯಗಳಿಗೆ ಯಾರು ಹೊಣೆ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇದಿನೇ ಹೆಚ್ಚುತ್ತಿದ್ದು, ಕೊಡಗು ಅಪಾಯದತ್ತ ಸಾಗುತ್ತಿದೆ. ಹೊರ ಜಿಲ್ಲೆಗಳಿಂದ ಬರುತ್ತಿರುವವರಿಗೆ ಯಾವುದೇ ನಿರ್ಬಂಧವಿಲ್ಲದ ಕಾರಣ ಅಂಥವರ ಸಂಪರ್ಕದಿಂದಲೂ ಸೋಂಕು ಬಾಧಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಬಿ.ಎನ್. ಪ್ರತ್ಯು, ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಕಷ್ಟು ಪ್ರದೇಶವನ್ನು ‘ನಿಯಂತ್ರಿತ ವಲಯ’ ಎಂದು ಘೋಷಿಸಲಾಗಿದೆ. ಅಲ್ಲಿನ ಸೋಂಕು ಬಾಧಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೂ ನಿಯಂತ್ರಿತ ವಲಯವನ್ನು ಇದುವರೆಗೂ ತೆರವುಗೊಳಿಸಿಲ್ಲ. ಗೋಣಿಕೊಪ್ಪಲಿನ ಸೆಸ್ಕ್ (ಕೆಇಬಿ)ಕಚೇರಿ ಹಿಂಭಾಗದ ನಿಯಂತ್ರಿತ ವಲಯವನ್ನು 17 ದಿನ ಕಳೆದರೂ ಜನರ ಚಟುವಟಿಕೆಗಳಿಗೆ ಮುಕ್ತಗೊಳಿಸಲಾಗಿಲ್ಲ. ಇದರಿಂದ ಅಲ್ಲಿನ ಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ಅಲ್ಲಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೋವಿಡ್-19ರ ನಿಯಂತ್ರಣ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಮತ್ತಷ್ಟು ಚುರುಕುಗೊಳಿಸಬೇಕು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬೇಕು. ಸೋಂಕು ಪರೀಕ್ಷಾ ವರದಿಯನ್ನು ದಿನದ 24 ಗಂಟೆಯೊಳಗೆ ನೀಡಬೇಕು ಎಂದು ಆಗ್ರಹಿಸಿರುವ ಬಿ.ಎನ್. ಪ್ರತ್ಯು ಅವರು, ಇದಕ್ಕಾಗಿ ಚರ್ಚಿಸಿ ಅಗತ್ಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಿಲ್ಲಾಧಿಕಾರಿಗಳು ಕ್ಷೇತ್ರದ ಸಂಸದರನ್ನು ಮತ್ತು ಶಾಸಕರನ್ನು ಒಳಗೊಂಡಂತೆ ಜನಪ್ರತಿನಿಧಿಗಳ ವಿಶೇಷ ಸಭೆಯನ್ನು ತುರ್ತಾಗಿ ಕರೆಯಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.